ಚಾರ್ಮಾಡಿ ಘಾಟ್ ಭಾಗದಿಂದ ಬಂದಿರುವ ದೈತ್ಯ ಕಾಡಾನೆ ಕೊಟ್ಟಿಗೆಹಾರ ಸುತ್ತಮುತ್ತಲ ಗ್ರಾಮಗಳಾದ ತರುವೆ, ದೇವನಗೂಲ್ ಗ್ರಾಮಕ್ಕೆ ಸತತವಾಗಿ ದಾಳಿ ನಡೆಸಿ ಅಪಾರ ಪ್ರಮಾಣದ ಬೆಳೆ ಹಾನಿಯುಂಟುಮಾಡುತ್ತಿದೆ.
ಕಷ್ಟ ಪಟ್ಟು ದುಡಿಮೆ ಮಾಡಿದರು ಫಸಲು ಪಡೆಯಲು ಕಾಡು ಪ್ರಾಣಿಗಳ ಹಾವಳಿಯಿಂದ ಸಾಧ್ಯವಾಗುತ್ತಿಲ್ಲ. ಪ್ರತಿ ವರ್ಷವೂ ಕಾಡಾನೆ ಕಾಟದಿಂದ ಕಂಗೆಟ್ಟು ಹೋಗಿದ್ದೇವೆ. ಬೆಳೆ ಹಾನಿಯಿಂದ ಸಂಕಷ್ಟ ಎದುರಿಸುತ್ತಿದ್ದೇವೆ. ಕಾಡಾನೆಯನ್ನು ಅರಣ್ಯ ಅಧಿಕಾರಿಗಳು ಕಾಡಿಗೆ ಅಟ್ಟಬೇಕು ಇಲ್ಲವೇ ಸ್ಥಳಾಂತರ ಮಾಡಬೇಕು’ ಎಂದು ನೊಂದ ರೈತ ಎ.ಆರ್.ಲೋಬೋ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ದೇವನಗೂಲ್ ಗ್ರಾಮದಲ್ಲಿ ಗುರುವಾರ ರಾತ್ರಿ ಕಾಡಾನೆಗಳು ದಾಳಿ ನಡೆಸಿ ಅಡಿಕೆ, ಕಾಫಿ, ಬಾಳೆ ಬೆಳೆ ತುಳಿದು ನಾಶ ಮಾಡಿದೆ. ದೇವನಗೂಲ್ ಗ್ರಾಮದ ರಿಚರ್ಡ್ ಲೋಬೊ ಅವರ ಮನೆಯ ಬಳಿಯ ತೋಟದಲ್ಲಿ ಇದುವರೆಗೆ ಮೂರು ಬಾರಿ ದಾಳಿ ನಡೆಸಿ ಅಡಿಕೆ, ಕಾಫಿ ಹಾಗೂ ಅಪಾರ ಪ್ರಮಾಣದ ಬಾಳೆ ಬೆಳೆ ನಾಶ ಮಾಡಿದೆ.
ಸಂಬಂಧಿಸಿದ ಅಧಿಕಾರಿಗಳು ಬೆಳೆ ಹಾನಿ ಬಗ್ಗೆ ಅವಲೋಕಿಸಿ ಪರಿಹಾರ ಒದಗಿಸಬೇಕು ಎಂದು ನೊಂದ ರೈತ ಆಗ್ರಹಿಸಿದ್ದಾರೆ.



