ಮಸಾಜ್ ಪಾರ್ಲರ್ ಹೆಸರಿನಲ್ಲಿ ಬೆದರಿಕೆ ಹಾಗೂ ಸುಲಿಗೆ ಯತ್ನ ನಡೆಸಿದ ಪ್ರಕರಣದಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಿದ್ದ ಕನ್ನಡ ಸುದ್ದಿವಾಹಿನಿ ಮಾಜಿ ನಿರೂಪಕಿ, ‘ಗಿಚ್ಚಿ ಗಿಲಿಗಿಲಿ’ ಶೋ ಸ್ಪರ್ಧಿ ದಿವ್ಯಾ ವಸಂತಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಹಿಂದೆ ʻಇಡೀ ರಾಜ್ಯವೇ ಖುಷಿ ಪಡೋ ಸುದ್ದಿಯಿದು’ ಎಂದು ಹೇಳಿ ವೈರಲ್ ಆಗಿದ್ದ ಮಾಜಿ ನಿರೂಪಕಿ ದಿವ್ಯಾ ವಸಂತ ಇಂದಿರಾನಗರದ ಮಸಾಜ್ ಪಾರ್ಲರ್ ನಲ್ಲಿ ಶ್ರೀಮಂತ ಗ್ರಾಹಕರಿಗೆ ಗಾಳಹಾಕಿ ಬೆದರಿಕೆ ಹಾಗೂ ಸುಲಿಗೆ ಯತ್ನ ನಡೆಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದರು.
ಈ ಪ್ರಕರಣ ಬಯಲಾಗುತ್ತಲೇ ಆಕೆ ತಲೆಮರೆಸಿಕೊಂಡಿದ್ದರು. ಆಕೆಯ ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಇದೀಗ ನೆರೆಯ ಕೇರಳದಲ್ಲಿ ಆಕೆಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಪ್ರಕರಣ ದಾಖಲಿಸಿಕೊಂಡಿದ್ದ ಜೀವನ್ ಭೀಮಾನಗರ ಪೊಲೀಸರು ಕಳೆದೊಂದು ವಾರದಿಂದ ದಿವ್ಯಾ ವಸಂತ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದರು. ಬ್ಲ್ಯಾಕ್‌ಮೇಲ್ ಮಾಡಿ ಹಲವು ಕಡೆ ಹಣ ಸುಲಿಗೆ ಮಾಡಿರುವ ಆರೋಪದ ಬೆನ್ನಲ್ಲೇ ಕಾಣೆಯಾಗಿದ್ದ ದಿವ್ಯಾ ವಸಂತರನ್ನು ಬಂಧಿಸುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೊದಲು ತಮಿಳುನಾಡಿಗೆ ಪರಾರಿಯಾಗಿದ್ದ ದಿವ್ಯಾ ವಸಂತ ಅಲ್ಲಿಂದ ಕೇರಳಕ್ಕೆ ತೆರಳಿದ್ದರು ಎನ್ನಲಾಗಿದೆ. ಇದೀಗ ಕೇರಳದಿಂದಲೇ ಬಂಧಿಸಿ ಪೊಲೀಸರು ಕರೆತಂದಿದ್ದಾರೆ. ಸದ್ಯ ಇದೀಗ ಕೇಸ್ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಏನಿದು ಪ್ರಕರಣ?
ಇಂದಿರಾನಗರದ ಟ್ರೀ ಸ್ಪಾ ಮತ್ತು ಬ್ಯೂಟಿ ಮಾಲೀಕನನ್ನು ಬ್ಲ್ಯಾಕ್‌ಮೇಲ್ ಮಾಡಿರುವ ಸುಲಿಗೆ ಪ್ರಕರಣದಲ್ಲಿ ದಿವ್ಯ ವಸಂತ ಆರೋಪಿಯಾಗಿದ್ದಾರೆ. ಜೆ. ಬಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ‘ಸ್ಪಾ’ವೊಂದರ ವ್ಯವಸ್ಥಾಪಕನನ್ನು ಬೆದರಿಸಿ ಹಣ ಸುಲಿಗೆ ಯತ್ನಿಸಿದ ಪ್ರಕರಣದಲ್ಲಿ ಈ ಮುಂಚೆ ಪೊಲೀಸರು ಮೂವರನ್ನು ಬಂಧಿಸಿದ್ದರು.

ರಾಜ್‌ನ್ಯೂಸ್ ಸುದ್ದಿವಾಹಿನಿ ಸಿಇಓ ವೆಂಕಟೇಶ್ ಹಾಗೂ ದಿವ್ಯಾ ವಸಂತ ಸಹೋದರ ಸಂದೇಶ್ ಬಂಧನವಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳ ಮೊಬೈಲ್ ಜಪ್ತಿ ಮಾಡಿಕೊಳ್ಳಲಾಗಿತ್ತು. ವೆಂಕಟೇಶ್ ಹಾಗೂ ದಿವ್ಯಾ ಸೇರಿ ‘ಸ್ಪೈ ರೀಸರ್ಚ್ ಟೀಂ’ ಹೆಸರಿನ ವಾಟ್ಸಪ್ ಗ್ರೂಪ್ ಮಾಡಿಕೊಂಡು ದುಷ್ಕೃತ್ಯಗಳನ್ನು ನಡೆಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವೈದ್ಯರು ಸೇರಿ 100ಕ್ಕೂ ಹೆಚ್ಚಿನ ಜನರಿಗೆ ಸುಲಿಗೆ: ರಾಜ್ ನ್ಯೂಸ್ ವಾಹಿನಿ ಸೇರುವ ಮುನ್ನ ಯೂಟ್ಯೂಬ್‌ನಲ್ಲಿ ತನ್ನದೇ ಚಾನಲ್ ಅನ್ನು ವೆಂಕಟೇಶ್ ಮಾಡಿಕೊಂಡಿದ್ದ. ಆ ಚಾನೆಲ್‌ಗೆ ಸಂದರ್ಶನಕ್ಕಾಗಿ ದಿವ್ಯಾಳನ್ನು ಆತ ಪರಿಚಯ ಮಾಡಿಕೊಂಡಿದ್ದ. ನಂತರ ಇಬ್ಬರ ನಡುವೆ ಆತ್ಮೀಯ ಒಡನಾಟವಿತ್ತು. ಈ ಗೆಳೆತನದಲ್ಲೇ ಇಬ್ಬರು ಸುಲಿಗೆ ಕೃತ್ಯಕ್ಕಿಳಿದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಸಾಜ್ ಪಾರ್ಲಗಳು ಹಾಗೂ ವೈದ್ಯರು ಸೇರಿ ಹಣವಂತರಿಗೆ ಹನಿಟ್ರ್ಯಾಪ್ ರೀತಿ ಸ್ನೇಹದ ಬಲೆಗೆ ಬೀಳಿಸಿಕೊಂಡು ಸುಲಿಗೆ ಮಾಡುತ್ತಿದರು. ಇದುವರೆಗೆ ಸುಮಾರು 100ಕ್ಕೂ ಹೆಚ್ಚಿನ ಜನರಿಂದ ಈ ತಂಡ ಸುಲಿಗೆ ಮಾಡಿದೆ.
ಸಂತ್ರಸ್ತರಿಂದ 80 ಸಾವಿರ, 50 ಸಾವಿರ ಹಾಗೂ 1 ಲಕ್ಷ ರು.ವರೆಗೆ ಆನ್‌ಲೈನ್ ಮೂಲಕ ತಮ್ಮ ಖಾತೆಗಳಿಗೆ ವೆಂಕಟೇಶ್ ಹಾಗೂ ದಿವ್ಯಾ ಹಣ ವರ್ಗಾಯಿಸಿಕೊಂಡಿರುವುದು ತನಿಖೆಯಲ್ಲಿ ಪತ್ತೆ ಯಾಗಿದೆ ಎಂದು ಮೂಲಗಳು ಹೇಳಿವೆ. ಬಂಧನ ಭೀತಿಗೊಳಗಾದ ದಿವ್ಯಾ, ಮನೆಯಲ್ಲಿದ್ದ ಕ್ಯಾಮೆ ರಾ, ಲ್ಯಾಪ್‌ಟಾಪ್ ಸೇರಿ ಕೆಲ ವಸ್ತು ಗಳನ್ನು ತೆಗೆದುಕೊಂಡು ಕಾರಿನಲ್ಲಿ ಪರಾರಿಯಾಗಿದ್ದಳು



