ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಪದಕ ಒಲಿದಿದ್ದು, ಪುರುಷರ ಹಾಕಿಯಲ್ಲಿ ಸ್ಪೈನ್ ತಂಡವನ್ನು ಮಣಿಸಿದ ಭಾರತ ಕಂಚಿನ ಪದಕಕ್ಕೆ ಮುತ್ತಿಟ್ಟಿದೆ.
ಹರ್ಮನ್ಪ್ರೀತ್ ಸಿಂಗ್ ನೇತೃತ್ವದ ಭಾರತ ಪುರುಷರ ತಂಡ ಸ್ಪೈನ್ ವಿರುದ್ಧ 2-1 ಅಂತರದ ಗೆಲುವಿನ ಮೂಲಕ ಒಲಿಂಪಿಕ್ಸ್ನ ಕಂಚಿನ ಪದಕ ಉಳಿಸಿಕೊಂಡಿದೆ.
ಪಂದ್ಯದ ಮೊದಲ ಕ್ವಾರ್ಟರ್ನಲ್ಲಿ ಎರಡೂ ತಂಡಗಳು ಗೋಲ್ ರಹಿತ ಆಟವನ್ನು ಆಡಿತು. ಆದರೆ, 2ನೇ ಕ್ವಾರ್ಟರ್ನಲ್ಲಿ ಸ್ಪೇನ್ ತಂಡದ ನಾಯಕ ಮಾರ್ಕ್ ಮಿರಾಲೆಸ್ 11ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಇದರೊಂದಿಗೆ ಸ್ಪೇನ್ ಮುನ್ನಡೆಯನ್ನು ಪಡೆದುಕೊಂಡಿತು.
ಆದರೆ ಸ್ವಲ್ಪ ಹೊತ್ತಿನಲ್ಲಿಯೇ ಭಾರತ ತಂಡದ ನಾಯಕ ಹರ್ಮನ್ಪ್ರೀತ್ ಸಿಂಗ್ ಗೋಲು ಬಾರಿಸುವ ಮೂಲಕ ಸಮಬಲಗೊಳ್ಳುವಂತೆ ಮಾಡಿದರು. ಮೂರನೇ ಕ್ವಾರ್ಟರ್ನಲ್ಲಿ ಮತ್ತೊಂದು ಗೋಲ್ ಬಾರಿಸಿ ಅವರು ಮುನ್ನಡೆ ತಂದುಕೊಟ್ಟರು. ಅದೇ ಮುನ್ನಡೆಯನ್ನು ಕೊನೇ ತನಕ ಉಳಿಸಿಕೊಂಡು ತಂಡ ಗೆಲುವು ಸಾಧಿಸಿತು.
ಕಳೆದ ಬಾರಿ ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತ ಕಂಚಿನ ಪದಕ ಗೆಲ್ಲುವ ಮೂಲಕ ಭಾರತ 41 ವರ್ಷಗಳ ಬಳಿಕ ಅಮೋಘ ಸಾಧನೆ ಮಾಡಿತ್ತು. ಅದೇ ಸಾಧನೆಯನ್ನು ಮತ್ತೆ ಪುನರಾವರ್ತನೆ ಮಾಡಿದೆ.
ಒಲಿಂಪಿಕ್ ಹಾಕಿ ಇತಿಹಾಸದಲ್ಲಿ ಭಾರತ ಪುರುಷರ ತಂಡವು ಎಂಟು ಚಿನ್ನ ಸೇರಿದಂತೆ 12 ಪದಕಗಳನ್ನು ಗೆದ್ದಿದೆ. ಕೊನೆಯ ಚಿನ್ನದ ಪದಕ 1980ರಲ್ಲಿ ಬಂದಿತ್ತು. ಟೋಕಿಯೊದಲ್ಲಿ ನಡೆದ 2020 ರ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದುಕೊಂಡಿತ್ತು.
ಸೆಮಿಪೈನಲ್ ನಲ್ಲಿ ಜರ್ಮನಿಯ ವಿರುದ್ಧ ಸೋತ ಭಾರತ ಕಂಚಿಗಾಗಿ ಸ್ಪೈನ್ ಎದುರು ಸೆಣಸಾಡಿತ್ತು. ಇದರೊಂದಿಗೆ ಭಾರತ ಪ್ಯಾರೀಸ್ ಒಲಂಪಿಕ್ ನಲ್ಲಿ ನಾಲ್ಕನೇ ಕಂಚಿನ ಪದಕ ಗೆದ್ದಿದೆ. ಇದಕ್ಕು ಮೊದಲು ಶೂಟಿಂಗ್ ನಲ್ಲಿ ಮೂರು ಕಂಚಿನ ಪದಕ ಗೆದ್ದಿತ್ತು.



