ಚಿಕ್ಕಮಗಳೂರು ನಗರ ಸಭೆ ನೂತನ ಅಧ್ಯಕ್ಷರಾಗಿ ಬಿಜೆಪಿಯ ಸುಜಾತಾ ಶಿವಕುಮಾರ್, ಉಪಾಧ್ಯಕ್ಷರಾಗಿ ಅನುಮಧುಕರ್ ಆಯ್ಕೆಯಾಗಿದ್ದಾರೆ.

ಗುರುವಾರ ಚುನಾವಣಾಧಿಕಾರಿಯಾಗಿದ್ದ ಉಪ ವಿಭಾಗಾಧಿಕಾರಿ ದಲ್ಜೀತ್ ಕುಮಾರ್ ಅವರ ನೇತೃತ್ವದಲ್ಲಿ ಮತದಾನ ಪ್ರಕ್ರಿಯೆ ನಡೆದು ಅಂತಿಮವಾಗಿ ಹೆಚ್ಚು ಮತಗಳನ್ನು ಪಡೆದ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಸುಜಾತ ಶಿವಕುಮಾರ್ ಅಧ್ಯಕ್ಷರಾಗಿ ಹಾಗೂ ಅನು ಮಧುಕರ್ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾಹಿತಿ ನೀಡಿದ ಚುನಾವಣಾಧಿಕಾರಿ ದಲ್ಜೀತ್ ಕುಮಾರ್ ರವರು ಅಧ್ಯಕ್ಷ ಸ್ಥಾನಕ್ಕೆ 4 ಮಂದಿ ನಾಮಪತ್ರ ಸಲ್ಲಿಸಿದ್ದರು. ಅಂತಿಮವಾಗಿ ಸುಜಾತ ಶಿವಕುಮಾರ್ ಹಾಗೂ ಗೌಸಿಯಾ ಖಾನ್ ಈ ಇಬ್ಬರು ಕಣದಲ್ಲಿದ್ದು ಮತದಾನ ನಡೆದಾಗ ಸುಜಾತ ಶಿವಕುಮಾರ್‌ರವರಿಗೆ 25 ಮತಗಳು ಹಾಗೂ ಗೌಸಿಯಾ ಖಾನ್‌ರವರಿಗೆ 15 ಮತಗಳು ಬಂದವು ಎಂದರು.
ಅದೇ ರೀತಿ ಉಪಾಧ್ಯಕ್ಷ ಸ್ಥಾನಕ್ಕೆ ಅಂತಿಮವಾಗಿ ಸ್ಪರ್ಧೆಯ ಕಣದಲ್ಲಿ ಉಳಿದಿದ್ದ ಅನು ಮಧುಕರ್ ಮತ್ತು ಇಂದಿರಾಶಂಕರ್ ಇವರಿಗೆ ಮತದಾನ ನಡೆದಾಗ ಅನುಮಧುಕರ್ ಪರವಾಗಿ 25 ಮತಗಳು ಹಾಗೂ ಇಂದಿರಾ ಶಂಕರ್ ಪರವಾಗಿ 15 ಮತಗಳು ಬಂದವು ಎಂದು ತಿಳಿಸಿದರು.
ನಗರಸಭೆ ಆವರಣದಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಉಪಸಭಾಪತಿ ಎಂ. ಕೆ. ಪ್ರಾಣೇಶ್, ಶಾಸಕರಾದ ಸಿ.ಟಿ. ರವಿ, ಎಸ್. ಎಲ್. ಭೋಜೇಗೌಡ, ಎಚ್.ಡಿ .ತಮ್ಮಯ್ಯ ಪಾಲ್ಗೊಂಡಿದ್ದರು.
ಬಿಜೆಪಿ -ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳ ಗೆಲುವು ನಿಶ್ಚಿತವಾಗಿದ್ದರೂ ಕಾಂಗ್ರೆಸ್ ಸಾಂಕೇತಿಕವಾಗಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು.
ನಿಗದಿತ ಅವಧಿಗೆ ರಾಜೀನಾಮೆ ಕೊಡದೆ ಬಂಡಾಯ ಸಾರಿ ಪೂರ್ಣಾವಧಿ ಮುಗಿಸಿದ್ದ ವರಸಿದ್ಧಿ ವೇಣುಗೋಪಾಲ್ ನಿಲುವು ಕುತೂಹಲ ಮೂಡಿಸಿದ್ದರೂ ಅಂತಿಮವಾಗಿ ಪಕ್ಷ ನೀಡಿದ್ದ ವಿಪ್ ಹಿನ್ನೆಲೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿ ಪರ ಮತ ಚಲಾಯಿಸಿದರು.
ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆ ಅಧಿಕೃತವಾಗಿ ಘೋಷಣೆ ಆಗುತ್ತಿದ್ದಂತೆ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.



