2022ರಲ್ಲಿ ಮೂಡಿಗೆರೆ ತಾಲ್ಲೂಕಿನ ಊರುಬಗೆ ಹೊಸಳ್ಳಿ ಗ್ರಾಮದಲ್ಲಿ ಸೆರೆಯಾಗಿದ್ದ ಮೂಡಿಗೆರೆ ಭೈರ ಎಂದೇ ನಾಮಕರಣಗೊಂಡಿದ್ದ ಕಾಡಾನೆಯೀಗ ವಿಶ್ವವಿಖ್ಯಾತ ಮೈಸೂರು ದಸರ ಗಜಪಡೆಗೆ ಆಯ್ಕೆಯಾಗುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಸೆರೆಯಾದ ಕೇವಲ ಒಂದೂವರೆ ವರ್ಷಕ್ಕೆ ಮೈಸೂರು ದಸರ ತಂಡಕ್ಕೆ ಆಯ್ಕೆಯಾಗುವ ಮೂಲಕ ದಾಖಲೆ ಮಾಡಿದೆ. ಮೂಡಿಗೆರೆ ಭೈರ ಎಂದು ಸ್ಥಳೀಯರಿಂದ ನಾಮಕರಣಗೊಂಡಿದ್ದ ಗಜರಾಜನಿಗೆ ಹೊಸ ನಾಮಕರಣ ಮಾಡಿದ್ದು, ಏಕಲವ್ಯ ಎಂದು ಹೆಸರಿಡಲಾಗಿದೆ. ಏಕಲವ್ಯ ಈಗ ಇಡೀ ದಸರ ಗಜಪಡೆಯಲ್ಲಿ ಅತ್ಯಂತ ಗಮನಸೆಳೆಯುವ ಆನೆಯಾಗಿ ಗುರುತಿಸಿಕೊಂಡಿದೆ.

ಮೂಡಿಗೆರೆ ತಾಲ್ಲೂಕಿನ ಊರುಬಗೆ, ಗುತ್ತಿ ಭಾಗದಲ್ಲಿ ಸಕಲೇಶಪುರ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಸಂಚರಿಸುತ್ತಾ ಕತ್ತಲಾದರೆ ಸಾಕು ಗದ್ದೆ ತೋಟಗಳಿಗೆ ಲಗ್ಗೆ ಇಟ್ಟು ಬೆಳೆನಾಶ ಮಾಡತ್ತಿದ್ದ ಭೈರ ಕೆಲವೊಮ್ಮೆ ಹಗಲು ಹೊತ್ತಿನಲ್ಲು ಜನವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ.
ಇದು ತನ್ನ ಗತ್ತು ಗೈರತ್ತಿನಿಂದ ಜನರ ಬಾಯಲ್ಲಿ ಭೈರ ಎಂದೇ ಕರೆಸಿಕೊಂಡಿತ್ತು. (ಭೈರ ಆನೆ ಯಾವುದು ಎನ್ನುವ ಬಗ್ಗೆ ಸ್ಥಳೀಯರಲ್ಲಿ ಸಾಕಷ್ಟು ಗೊಂದಲಗಳಿದ್ದು, ಕೆಲವರು ಈಗ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿರುವ ಆನೆಯೇ ಭೈರ ಆನೆ ಎಂದು ಸಹ ಹೇಳುತ್ತಾರೆ). ಊರುಬಗೆ ಸಮೀಪ ಅರ್ಜುನ ಎಂಬ ವ್ಯಕ್ತಿಯನ್ನು ತುಳಿದು ಸಾಯಿಸಿದ್ದು ಇದೇ ಆನೆ ಎಂದು ಹೇಳಲಾಗುತ್ತಿತ್ತು. 2022ರ ಡಿಸೆಂಬರ್ 11 ರಂದು ಈ ಆನೆಯನ್ನು ಮೂಡಿಗೆರೆ ತಾಲ್ಲೂಕಿನ ಊರುಬಗೆ ಸಮೀಪ ಯು.ಹೊಸಳ್ಳಿ ಗ್ರಾಮದಲ್ಲಿ ಸೆರೆಹಿಡಿಯಲಾಗಿತ್ತು.
ಅದೇನೆ ಇರಲಿ ನಮ್ಮ ಮೂಡಿಗೆರೆ ತಾಲ್ಲೂಕಿನಿಂದ ಸೆರೆಹಿಡಿಯಲ್ಪಟ್ಟ, ವರ್ಷಗಳ ಕಾಲ ನಮ್ಮೂರಿನಲ್ಲಿ ಓಡಾಡಿಕೊಂಡಿದ್ದ, ಆಗಾಗ ಜನರೆದುರು ಪ್ರತ್ಯಕ್ಷವಾಗುತ್ತಿದ್ದ ಆನೆಯೊಂದು ಕೇವಲ ಒಂದೂವರೆ ವರ್ಷಕ್ಕೆ ದಸರ ಗಜಪಡೆ ಸೇರಿರುವುದು ಒಂದು ರೀತಿಯ ಪುಳಕದ ವಿಷಯ.

ಅರಣ್ಯ ಅಧಿಕಾರಿಗಳು ಮತ್ತು ಮಾವುತರು ಅಭಿಪ್ರಾಯಿಸಿರುವಂತೆ ಭೈರ (ಏಕಲವ್ಯ) ಆನೆ ಅತ್ಯಂತ ಸೌಮ್ಯ ಮತ್ತು ಗಾಂಭೀರ್ಯ ಸ್ವಭಾವವನ್ನು ಹೊಂದಿದ್ದು, ಬಹಳ ಬೇಗ ಅದು ಮಾತುಕೇಳಿ ಪಳಗಿದ್ದು, ಜನರನ್ನು ಕಂಡರೆ ಯಾವುದೇ ರೀತಿಯಲ್ಲಿ ಗಲಿಬಿಲಿಗೊಳ್ಳುವುದಿಲ್ಲ ಎಂದೆಲ್ಲ ಹೊಗಳಿಕೆ ಮಾತುಗಳನ್ನು ಆಡಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿ ಇದು ಮುಂದೆ ಅರ್ಜುನ ಆನೆಯ ಸ್ಥಾನವನ್ನು ತುಂಬುವ ಎಲ್ಲಾ ಸಾಧ್ಯತೆಯಿದೆ. ಅಂಬಾರಿ ಹೊರುವ ಅದೃಷ್ಟ ಮತ್ತು ಅರ್ಹತೆ ಇರುವಂತೆ ತೋರುತ್ತದೆ ಎಂದೆಲ್ಲಾ ಮಾತುಗಳು ಕೇಳಿಬರುತ್ತಿವೆ.
https://www.instagram.com/kannadaupdateslive/reel/C-7mBm8vPr4/
ಏಕಲವ್ಯ ಎಂಬ ಹೆಸರು ಇಟ್ಟಿರುವುದೇಕೆ ?
ಅಂದಾಜು 39 ವರ್ಷ ವಯಸ್ಸಿನ ಭೈರ ಆನೆಗೆ ಏಕಲವ್ಯ ಎಂದು ಹೆಸರಿಟ್ಟಿರುವುದಕ್ಕೆ ಒಂದು ಪ್ರಮುಖ ಕಾರಣವಿದೆ.
ಭೈರ ಆನೆಯನ್ನು ಸೆರೆಹಿಡಿಯಲು ಎಷ್ಟು ಪ್ರಯಾಸಪಡಲಾಗಿತ್ತೋ, ಸೆರೆಹಿಡಿದು ಪಳಗಿಸಲು ಪ್ರಾರಂಭಿಸಿದಾಗ ಎಲ್ಲರಿಗೂ ಆಶ್ಚರ್ಯ ಕಾದಿತ್ತು. ಕಾಡಿನಲ್ಲಿದ್ದಾಗ ಅತ್ಯಂತ ಪುಂಡತನ ತೋರುತ್ತಿದ್ದ ಈ ದೈತ್ಯ ಗಾತ್ರದ ಆನೆ ಸೆರೆಯಾದ ನಂತರ ಅತ್ಯಂತ ಸೌಮ್ಯ ಸ್ವಭಾವವನ್ನು ತೋರ್ಪಡಿಸತೊಡಗಿತ್ತು. ಬಹಳ ಬೇಗ ಮಾವುತರ ಮಾತುಗಳನ್ನು ಕೇಳತೊಡಗಿತು. ಅದಾಗಲೇ ತರಬೇತಿ ಪಡೆದ ಆನೆಯಂತೆ ವರ್ತಿಸತೊಡಗಿತು. ಕಾಡಿನಲ್ಲಿಯೇ ಎಲ್ಲವನ್ನು ಕಲಿತುಬಂದಂತೆ ತೋರುತ್ತಿತ್ತು. ಮಹಾಭಾರತದಲ್ಲಿ ಏಕಲವ್ಯ ದ್ರೋಣಾಚಾರ್ಯರ ಪ್ರತಿಮೆಯಿಟ್ಟು ಸ್ವಯಂವಿದ್ಯೆ ಕಲಿತಂತೆ, ಭೈರ ಆನೆ ತಾನೇ ಸ್ವತಃ ಎಲ್ಲಾ ಪಟ್ಟುಗಳನ್ನು ಕಲಿತುಬಂದಿರುವಂತೆ ವರ್ತಿಸತೊಡಗಿತ್ತು. ಆ ಕಾರಣದಿಂದ ಗಜರಾಜನಿಗೆ ಏಕಲವ್ಯ ಎಂದು ನಾಮಕರಣ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಭೈರಾ ಆನೆಯನ್ನು ಹಿಡಿಯಲು ಅರಣ್ಯ ಇಲಾಖೆ ಸಾಕಷ್ಟು ಕಸರತ್ತು ನಡೆಸಿತ್ತು. ಅರಣ್ಯ ಸಿಬ್ಬಂದಿಯ ಕಣ್ಣುತಪ್ಪಿಸಿ ಓಡಾಡುತ್ತಿದ್ದ ಭೈರಾ ಈ ಭಾಗದ ರೈತರ ಪಾಲಿಗೆ ವಿಲನ್ ಆಗಿತ್ತು. ಆದರೆ ಅದೇ ವಿಲನ್ ಈಗ ಹೀರೋ ಆಗಿ ಮೆರೆಯಲು ಸಜ್ಜಾಗಿರುವುದು ಮಾತ್ರ ಸೋಜಿಗ. ದಸರ ಗಜಪಡೆ ಸೇರಿರುವ ನಮ್ಮೂರ ಭೈರನಿಗೆ ಅಂಬಾರಿ ಹೊರುವ ಅವಕಾಶ ಬಹುಬೇಗ ಸಿಗಲಿ ಎಂದು ಆಶಿಸೋಣ ಮನದುಂಬಿ ಹರಸೋಣ.
ಏಕಲವ್ಯ ಆನೆಯ ಬಗ್ಗೆ ಟಿವಿ 9 ಮಾಧ್ಯಮಕ್ಕೆ ಡಿಸಿಎಫ್ ಹೇಳಿಕೆ ಕೇಳಿ



