ಮೂಡಿಗೆರೆ ತಾಲೂಕಿನ ಹೊಯ್ಸಳಲು ಗ್ರಾಮದ 4 ಕಿ,ಮೀ ರಸ್ತೆ ಸಂಪೂರ್ಣ ಗುಂಡಿ ಗೊಟರುಗಳಿಂದ ಕೂಡಿದ್ದು, ಇದರಿಂದ ವಾಹನಗಳು ಪ್ರತಿನಿತ್ಯ ಜಖಂಗೊಳ್ಳುತ್ತಿದ್ದು, ರಸ್ತೆ ಸಂಚಾರಕ್ಕೆ ತೀವ್ರ ರೀತಿಯಲ್ಲಿ ತೊಂದರೆ ಎದುರಾಗಿದೆ.
ಹೊಯ್ಸಳಲು ಗ್ರಾಮದಲ್ಲಿ 300 ಕ್ಕೂ ಅಧಿಕ ಕುಟುಂಬವಿದೆ. ಇಲ್ಲಿಗೆ ಪ್ರತಿನಿತ್ಯ ಕೆಎಸ್‍ಆರ್‍ಟಿಸಿ ಬಸ್ ಬೆಳಗ್ಗೆ 8.30ಕ್ಕೆ ಸಂಜೆ 5 ಗಂಟೆಗೆ ಆಗಮಿಸುತ್ತಿದ್ದರಿಂದ ಪ್ರತಿದಿನ ಸ್ಥಳೀಯರು ಹಾಗೂ ಶಾಲೆ ಕಾಲೇಜಿಗೆ ತೆರಳಲು ಅನುಕೂಲವಾಗಿತ್ತು. ಆದರೆ ರಸ್ತೆ ಸರಿಯಲ್ಲದ ಕಾರಣ ಬುಧವಾರ ಬೆಳಗ್ಗೆ ಆಗಮಿಸಿದ್ದ ಕೆಎಸ್‍ಆರ್‍ಟಿಸಿ ಬಸ್ ಗುಂಡಿಗೆ ಸಿಕ್ಕಿಕೊಂಡು ಸುಮಾರು 2 ಗಂಟೆ ಕಾಲ ಸಿಲುಕಿಕೊಂಡಿತ್ತು.

ಮಂಗಳವಾರ ಕೂಡ ಬೆಳಗ್ಗೆ ಲಾರಿಯೊಂದು ಈ ರಸ್ತೆಯಲ್ಲಿ ಸಿಲುಕಿಕೊಂಡಿದ್ದು, ಸುಮಾರು 5 ಗಂಟೆ ಸಂಚಾರಕ್ಕೆ ತೊಡಕುಂಟಾಗಿತ್ತು. ರಸ್ತೆ ದುರಸ್ತಿಯಾಗುವವರೆಗೆ ಬಸ್ ಸಂಚಾರ ಸ್ಥಗಿತಗೊಳಿಸಲಾಗುವುದು ಎಂದು ಕೆಎಸ್‍ಆರ್‍ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಗ್ರಾಮದ ಜನರು ಪಟ್ಟಣಕ್ಕೆ ತೆರಳಲು ತೊಂದರೆ ಉಂಟಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಳೆದ 18 ವರ್ಷದ ಹಿಂದೆ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ರೋಜ್‍ಗಾರ್ ಯೋಜನೆಯಲ್ಲಿ ರಸ್ತೆ ಡಾಂಬರೀಕರಣಗೊಂಡಿದ್ದು, ಇದೀಗ ರಸ್ತೆ ಸಂಪೂರ್ಣ ಹಾಳಾಗಿದೆ. 25 ಲಕ್ಷ ಶಾಸಕರ ಅನುದಾನ ಬಳಸಿ ಸಂಪೂರ್ಣ ಹಾಳಾಗಿದ್ದ 2 ತಿರುವಿನಲ್ಲಿ ಒಟ್ಟು 500 ಮೀಟರ್ ರಸ್ತೆ ಕಾಂಕ್ರೀಟ್ ರಸ್ತೆ ಆಗಿದೆ. ಉಳಿದ ಕಡೆ ರಸ್ತೆ ದುರಸ್ತಿ ಕಾರ್ಯ ನಡೆಯಬೇಕಿದೆ. ಶಾಲೆ ಪ್ರಾರಂಭಗೊಳ್ಳುವ ಮುನ್ನ ಕೇಂದ್ರ ಸರಕಾರ ಹಣ ಬಿಡುಗಡೆ ಮಾಡಿ ರಸ್ತೆ ದುರಸ್ಥಿ ಕಾರ್ಯ ನಡೆಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.



