ಮನೆ ಮಾರಾಟ ವಿಚಾರಕ್ಕೆ ಸಂಬಂಧಿಸಿದಂತೆ ಸಂಬಂಧಿಕರ ನಡುವೆ ಉಂಟಾದ ಮನಸ್ತಾಪ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.
ಮನೆ ಮಾರಾಟ ಮಾಡಿ ಮೂರು ವರ್ಷಗಳಾಗಿದ್ದರೂ ಮನೆ ಖಾಲಿ ಮಾಡದ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಹೆಂಡತಿಯ ತಮ್ಮನನ್ನೇ ಕೊಲೆ ಮಾಡಿರುವ ಘಟನೆ ನಗರದ ತಮಿಳು ಕಾಲೋನಿಯಲ್ಲಿ ನಡೆದಿದೆ.
ಹತ್ಯೆಯಾದ ವ್ಯಕ್ತಿಯನ್ನು ಮಂಜು (50) ಎಂದು ಗುರುತಿಸಲಾಗಿದೆ. ಮೃತ ಮಂಜು ಬಾಮೈದ ಗೋಪಾಲ್ ಎಂಬಾತ ಕೊಲೆಗೈದ ಆರೋಪಿಯಾಗಿದ್ದಾನೆ.
ಮಂಜು ಹಾಗೂ ಗೋಪಾಲ್ ಒಂದೇ ಏರಿಯಾದ ನಿವಾಸಿಗಳಾಗಿದ್ದರು. ಕೊಲೆಯಾದ ಮಂಜು ಅವರ ಸಹೋದರಿಯನ್ನು ಗೋಪಾಲ್ ಮದುವೆಯಾಗಿದ್ದ. ಮೃತ ಮಂಜು ತನ್ನ ಮನೆಯನ್ನ ಬಾಮೈದ ಗೋಪಾಲ್‌ಗೆ ಮಾರಿದ್ದನು. ಮನೆ ಮಾರಾಟ ಮಾಡಿಯೂ, 3 ವರ್ಷಗಳಿಂದ ಮನೆಯನ್ನು ಖಾಲಿ ಮಾಡಿರಲಿಲ್ಲ. ಮನೆ ಖಾಲಿ ಮಾಡುವಂತೆ ಸಾಕಷ್ಟು ಬಾರಿ ಆರೋಪಿ ಎಚ್ಚರಿಕೆ ನೀಡಿದ್ದ.
ಇದೇ ವಿಚಾರಕ್ಕೆ ಆಗಾಗ ಇಬ್ಬರಿಗೂ ಗಲಾಟೆಯಾಗುತ್ತಿತ್ತು. ಮಂಗಳವಾರ ಈ ವಿಚಾರವಾಗಿ ಜಗಳವಾಗಿದೆ. ಈ ವೇಳೆ ಅಲ್ಲೇ ಇದ್ದ ಇಟ್ಟಿಗೆಯನ್ನು ತೆಗೆದುಕೊಂಡು ಗೋಪಾಲ್ ಬಾವ ಮಂಜು ತಲೆಗೆ ಹೊಡೆದಿದ್ದಾನೆ. ಈ ವೇಳೆ ತೀವ್ರ ರಕ್ತಸ್ರಾವವಾಗುತ್ತಿದ್ದ ಮಂಜುನನ್ನ ಆಸ್ಪತ್ರೆಗೆ ಕರೆತಂದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಗೋಪಾಲ್‌ನನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ.



