ಸರ್ಫೇಸಿ ಕಾಯ್ದೆಯಡಿ ಕಾಫಿ ಬೆಳೆಗಾರರ ಸುಸ್ತಿ ಸಾಲಕ್ಕೆ ಸಂಬಂಧಿಸಿದಂತೆ ಆಸ್ತಿಗಳನ್ನು ಇ-ಹರಾಜು ಮಾಡದಂತೆ ಹಾಗೂ OTS(ಒನ್ ಟೈಮ್ ಸೆಟ್ಲ್ ಮೆಂಟ್) ಮಾಡಿಕೊಳ್ಳಲು ಅನುವಾಗುವಂತೆ 6 ತಿಂಗಳ ಕಾಲ ಯಾವುದೇ ಕ್ರಮ ಕೈಗೊಳ್ಳದಂತೆ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರ ನೇತೃತ್ವದ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ಚಿಕ್ಕಮಗಳೂರು ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯಸ್ಥರಾದ ಸುರೇಶ್ ರವರು ಎಲ್ಲ ಬ್ಯಾಂಕ್ ಗಳಿಗೆ ಸದರಿ ಸೂಚನೆಯ ಪ್ರತಿಯನ್ನು ರವಾನಿಸಿದ್ದಾರೆ.
ಈ ಸಂದರ್ಭದಲ್ಲಿ ಮೂಡಿಗೆರೆ ತಾಲ್ಲೂಕು ಬೆಳೆಗಾರ ಸಂಘದ ಅಧ್ಯಕ್ಷರಾದ ಬಿ. ಆರ್ . ಬಾಲಕೃಷ್ಣ, ಬಿಜೆಪಿ ಮುಖಂಡರಾದ ದೀಪಕ್ ದೊಡ್ಡಯ್ಯ , ಬೆಳೆಗಾರರಾದ ಶ್ರೇಯಸ್, ನಿಡುವಾಳೆ ಚಂದ್ರು, ಪ್ರವೀಣ್ ಹಂತೂರು ಹಾಗೂ ಸುರೇಂದ್ರ ಕೋಳೂರು ರವರು ಹಾಜರಿದ್ದರು.
ಸರ್ಫೇಸಿ ಕಾಯ್ದೆಯಡಿ ಸುಸ್ತಿ ಸಾಲಗಾರರ ಆಸ್ತಿ ಹರಾಜಿಗೆ ಮುಂದಾಗಿದ್ದ ಬ್ಯಾಂಕ್ ಗಳ ಕ್ರಮವನ್ನು ವಿರೋಧಿಸಿ ಬೆಳೆಗಾರರು ಮಂಗಳೂರಿನಲ್ಲಿ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನಲೆಯಲ್ಲಿ ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿಯವರು, ಉಪಸಭಾಪತಿ ಎಂ.ಕೆ. ಪ್ರಾಣೇಶ್, ಶಾಸಕ ಹೆಚ್.ಡಿ. ತಮ್ಮಯ್ಯ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ. ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವರುಂದ, ವಿವಿಧ ಬೆಳೆಗಾರರ ಸಂಘಟನೆಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಬೆಳೆಗಾರರು, ಬ್ಯಾಂಕ್ ಅಧಿಕಾರಿಗಳ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಜಮೀನು ಹರಾಜು ಪ್ರಕ್ರಿಯೆ ಮುಂದೂಡಲು, 6 ತಿಂಗಳ ಕಾಲಾವಕಾಶ ನೀಡಲು ಸಂಸದರು ಅಧಿಕಾರಿಳಿಗೆ ಸೂಚನೆ ನೀಡಿದ್ದರು ಮತ್ತು ಕಾಫಿ ಮೇಲಿನ ಸಾಲವನ್ನು ಸರ್ಫೇಸಿ ಕಾಯ್ದೆಯಿಂದ ಹೊರಗಿಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೇಲೆ ಒತ್ತಡ ಹಾಕಲು ತೀರ್ಮಾನಿಸಲಾಗಿತ್ತು.
ಈ ಹಿನ್ನಲೆಯಲ್ಲಿ ಲೀಡ್ ಬ್ಯಾಂಕ್ ಅಧ್ಯಕ್ಷರು ಎಲ್ಲಾ ಬ್ಯಾಂಕ್ ಗಳಿಗೆ ಈ ಸೂಚನೆಯ ಪ್ರತಿಯನ್ನು ರವಾನಿಸಿದ್ದಾರೆ. ಈ ಮೂಲಕ ಸುಸ್ತಿ ಸಾಲಗಾರರು ಸದ್ಯಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ.



