ಸರ್ಕಾರಿ ನೌಕರರ ಚುನಾವಣೆಗೆ ಮೂಡಿಗೆರೆ ಆರೋಗ್ಯ ಇಲಾಖೆಯ 14 ಮಂದಿಯನ್ನು ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ. ಇದನ್ನು ಸರಿಪಡಿಸಿ ಮತದಾನಕ್ಕೆ ಅವಕಾಶ ಕಲ್ಪಿಸಿಕೊಡಬೇಕೆಂದು ಆರೋಗ್ಯ ಇಲಾಖೆ ನೌಕರರು ಶುಕ್ರವಾರ ಚುನಾವಣಾಧಿಕಾರಿ ರಮೇಶ್ ಹಾಗೂ ತಹಸೀಲ್ದಾರ್ ರಾಜಶೇಖರ್ ಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅರೋಗ್ಯ ಇಲಾಖೆ ನೌಕರರು ಮಾತನಾಡಿ, ಆರೋಗ್ಯ ಇಲಾಖೆಯ 3 ಕ್ಷೇತ್ರದ ನಿರ್ದೇಶಕರ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳನ್ನು ಒಂದೇ ಮತ ಪತ್ರದಲ್ಲಿ ಅಭ್ಯರ್ಥಿಗಳ ಹೆಸರನ್ನು ಸೇರಿಸಲಾಗಿತ್ತು. ಅದನ್ನು ಈಗ ಸರಿಪಡಿಸಲಾಗಿದೆ. ಆದರೆ ಆರೋಗ್ಯ ಇಲಾಖೆಯ ಡಾ.ರೂಪಾ, ಡಾ.ಗೌತಮ್, ಡಾ.ವಿರೂಪಾಕ್ಷ, ಡಾ.ಉಮೇಶ್‍ಬಟ್, ಹೇಮಾ, ನಳಿನಾಕ್ಷಿ ಸೇರಿದಂತೆ 14 ಮಂದಿ ನೌಕರರನ್ನು ಮತದಾರ ಪಟ್ಟಿದಿಂದ ಕೈ ಬಿಡಲಾಗಿದೆ ಎಂದು ಹೇಳಿದರು.
ಮತದಾರ ಪಟ್ಟಿ ತಯಾರಿಸುವಾಗ, ನಮ್ಮ ಇಲಾಖೆಯಲ್ಲಿರುವ ನೌಕರರ ಬಗ್ಗೆ ನಮ್ಮಿಂದ ಯಾವುದೇ ಮಾಹಿತಿ ಪಡೆದುಕೊಂಡಿಲ್ಲ. ನಿಯಮದ ಪ್ರಕಾರದ ಚುನಾವಣೆ ಪ್ರಕ್ರಿಯೆ ನಡೆಯುವ 26 ದಿನದ ಹಿಂದೆಯೇ ಮತದಾರ ಪಟ್ಟಿ ನೋಟೀಸ್ ಬೋರ್ಡ್‍ನಲ್ಲಿ ಹಾಕಬೇಕಿತ್ತು. ಅದನ್ನು ಮಾಡಲಿಲ್ಲ. ಕಲ್ಬುರ್ಗಿಯಲ್ಲಿ ಇದೇ ಸಮಸ್ಯೆ ಉಂಟಾಗಿದ್ದು, ಕೈಬಿಟ್ಟವರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಹೈಕೋರ್ಟ್ ಆದೇಶ ಮಾಡಿದೆ. ಹಾಗಾಗಿ ಇಲ್ಲಿಯೂ ಕೂಡ ಕೈ ಬಿಟ್ಟವರಿಗೆ ಮತದಾನದ ಹಕ್ಕು ನೀಡಬೇಕೆಂದು ಒತ್ತಾಯಿಸಿದರು.



