ಭಾರತ ದೇಶಕ್ಕೆ ಕಾಫಿ ಉದ್ಯಮ ಮತ್ತು ಬೆಳೆಗಾರರ ಬೆವರಿನ ಫಲವಾಗಿ ಅತೀ ಹೆಚ್ಚು ವಿದೇಶಿ ವಿನಿಮಯ ಕೇಂದ್ರ ಸರ್ಕಾರಕ್ಕೆ ಬರುತ್ತಿದ್ದು, ಇದಕ್ಕೆ ಪೂರಕವಾದ ವಾತಾವರಣ ನಿರ್ಮಾಣ ಮಾಡುವ ವ್ಯವಸ್ಥೆಯನ್ನು ಆಡಳಿತ ನಡೆಸುವ ಅಧಿಕಾರಿಗಳು ಜಾರಿಮಾಡಬೇಕು ಎಂದು ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಮನವಿ ಮಾಡಿದರು.
ಅವರು ಬುಧವಾರ ಚಿಕ್ಕಮಗಳೂರು ನಗರದ ಎಐಟಿ ವೃತ್ತದಲ್ಲಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ ಜಿಲ್ಲೆಯ ಕಾಫಿ ಬೆಳೆಗಾರರು ಮತ್ತು ಕಾಫಿ ಮಂಡಳಿ ವಿಶೇಷ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ವಲಸೆ ಕಾರ್ಮಿಕರಿಗೆ ಕಾಫಿ ಬೆಳೆಗಾರರು ಸೌಜನ್ಯದಿಂದ ಎಲ್ಲಾ ರೀತಿಯ ಸೌಲಭ್ಯಗಳ ಜೊತೆಗೆ ಕೆಲಸ ಕೊಟ್ಟು ಉತ್ತಮ ವೇತನ ನೀಡಿ ಇಷ್ಟು ವರ್ಷಗಳಿಂದ ಪೋಷಣೆ ಮಾಡಿದ್ದೇವೆ. ಆದರೆ ಹಿಂದೆ ಯಾವುದೇ ಸರ್ಕಾರದ ಪ್ರಾಯೋಜಕತ್ವದ ಸಹಾಯ ಕಾಫಿ ಬೆಳೆಗಾರರಿಗೆ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಫಿ ಬೆಳೆಗಾರರ ಬದುಕಿಗೆ ಮತ್ತು ಕಾಫಿ ತೋಟಗಳ ನಿರ್ವಹಣೆಗೆ ವಲಸೆ ಕಾರ್ಮಿಕರು ಆಸರೆ ಆಗಿದ್ದರು. ಅದಕ್ಕೆ ನಾವೆಲ್ಲರೂ ಕೊಡುಗೆ ನೀಡಿದ್ದೇವೆ. ಜೊತೆಗೆ ಕಾರ್ಮಿಕರ ಹಸಿವು ನೀಗಿಸುವ ಕೆಲಸವನ್ನು ಬೆಳೆಗಾರರು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಇಂದು ಕಾರ್ಮಿಕರ ಕೊರತೆಯ ಜೊತೆಗೆ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಅದಕ್ಕೆ ಪೂರಕವಾಗಿ ದೇಶದ ಬೇರೆ ಬೇರೆ ಭಾಗದಿಂದ ಕಾರ್ಮಿಕರು ಆಗಮಿಸುತ್ತಿದ್ದು ಇವರನ್ನು ಬರುವುದು ಬೇಡ ಎಂದು ಹೇಳುವ ಬದಲಾಗಿ ಕಾರ್ಮಿಕರಿಂದ ಪೂರಕ ದಾಖಲೆಗಳನ್ನು ಪಡೆಯಬೇಕೆಂಬುದು ನಿಯಮವಾಗಿದೆ ಎಂದರು.
ನಾಗರಿಕ ಬಂದೂಕು ಪರವಾನಗಿ ನವೀಕರಣ ಮಾಡುವ ಸಂದರ್ಭದಲ್ಲಿ ಸ್ಥಳೀಯ ಪೊಲೀಸರು ಸಾಗಾಣೆ ಮಾಡುತ್ತಿದ್ದಾಗ ತಡೆದು ಬಂದೂಕು ವಶಪಡಿಸಿಕೊಳ್ಳುತ್ತಿದ್ದಾರೆ ಎಂಬ ದೂರುಗಳು ಬರುತ್ತಿದ್ದು, ಇದು ಅನಿವಾರ್ಯವಾಗಿದ್ದರೂ ಇಲಾಖೆಯೊಂದಿಗೆ ಸಹಕರಿಸುವುದು ಬೆಳೆಗಾರರ ಕರ್ತವ್ಯ ಎಂದು ಹೇಳಿದರು.

ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಂ ಅಮಟೆ ಮಾತನಾಡಿ ಬಂದೂಕು ತರಬೇತಿ, ವಲಸೆ ಕಾರ್ಮಿಕರ ದಾಖಲೆ ಸಲ್ಲಿಕೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಬೆಳೆಗಾರರಿಗೆ ಮಾಹಿತಿ, ಸಲಹೆ ನೀಡಿದರು.
ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹೆಚ್.ಟಿ ಮೋಹನ್ ಕುಮಾರ್ ಮಾತನಾಡಿ, ಕಾಫಿ ಬೆಳೆಗಾರರು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳ ಬಗ್ಗೆ ಸಭೆಯ ಗಮನಕ್ಕೆ ತಂದರು.
ಸಭೆಯಲ್ಲಿ ಕಾಫಿ ಮಂಡಳಿ ಉಪನಿರ್ದೇಶಕ ವೆಂಕಟರೆಡ್ಡಿ, ರತೀಶ್ ಕುಮಾರ್, ಉತ್ತಮ್, ಟಿ.ಡಿ ಮಲ್ಲೇಶ್, ಬಿ.ಆರ್. ಬಾಲಕೃಷ್ಣ, ಮನೋಹರ್, ಎಂ.ಎಸ್.ಲಿಂಗಪ್ಪಗೌಡ, ಹೆಚ್.ಎಂ ಶ್ರೀಧರ್, ಮಹೇಂದ್ರ, ವೆಂಕಟೇಗೌಡ, ರತ್ನಾಕರ್, ಸುರೇಶ್, ಜಯರಾಜ್, ನಾಗಭೂಷಣ್, ಕೊಳಗಾವೆ ರವಿ ಮತ್ತಿತರರು ಉಪಸ್ಥಿತರಿದ್ದರು. ಕೆರೆಮಕ್ಕಿ ಮಹೇಶ್ ಸ್ವಾಗತಿಸಿದರು.
ಜಿಲ್ಲೆಯ ನೂರಾರು ಕಾಫಿ ಬೆಳೆಗಾರರು ಸಭೆಯಲ್ಲಿ ಭಾಗವಹಿಸಿದ್ದರು.



