ಮಂಡ್ಯದಲ್ಲಿ ಡಿಸೆಂಬರ್ 20 ರಿಂದ 22 ರವರೆಗೆ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಗೊ.ರು. ಚನ್ನಬಸಪ್ಪ ಅವರನ್ನು ಆಯ್ಕೆ ಮಾಡಿರುವುದನ್ನು ಮೂಡಿಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸ್ವಾಗತಿಸಿದೆ.

ತಾಲ್ಲೂಕು ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಮಾತನಾಡಿದ ಅಧ್ಯಕ್ಷ ಡಿ.ಕೆ. ಲಕ್ಷ್ಮಣಗೌಡರು ; ಗೊ.ರು. ಚನ್ನಬಸಪ್ಪ ಅವರು ನಮ್ಮ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನವರಾಗಿದ್ದು, ಕನ್ನಡದ ಹಿರಿಯ ಸಾಹಿತಿಯಾಗಿ ಗುರುತಿಸಿಕೊಂಡಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದರು.
ಗೊ.ರು. ಚನ್ನಬಸಪ್ಪ ಅವರು ಅನೇಕ ಮಹತ್ವದ ಕೃತಿಗಳನ್ನು ರಚಿಸಿದ್ದು, ಅವರು ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರು ಎಲೆಮರೆಯ ಕಾಯಿಯಂತೆ ಕನ್ನಡ ಸೇವೆ ಮಾಡಿದ್ದಾರೆ. ಇಂತಹ ಮಹನೀಯರನ್ನು ಗುರುತಿಸಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವ ರಾಜ್ಯ ಕ.ಸಾ.ಪ. ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ನಿರ್ಧಾರ ಅಭಿನಂದನಾರ್ಹ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ಸುಚಿತ್ರ ಪ್ರಸನ್ನ, ಬಿ.ಪಿ. ಪ್ರಕಾಶ್ ಬಕ್ಕಿ, ಗೌರವ ಸಂಚಾಲಕ ಎಂ.ಎಸ್. ನಾಗರಾಜ್, ಬಕ್ಕಿ ರವಿ, ನವೀನ್ ಆನೆದಿಬ್ಬ ಮುಂತಾದವರು ಉಪಸ್ಥಿತರಿದ್ದರು.


