ಸರಕಾರಿ ನೌಕರರ ಮನಸ್ಸು ಮತ್ತು ದೇಹ ಸಮತೋಲನದಿಂದ ಇರಬೇಕು. ಆಗ ಮಾತ್ರ ಕೆಲಸ ಮುಗಿಸಿ ಸಂಜೆ ಉತ್ಸಾಹದಿಂದ ಮನೆಗೆ ಹೋಗಲು ಸಾಧ್ಯ. ಸರಕಾರಿ ನೌಕರರು ಮಾನಸಿಕವಾಗಿ ದೈಹಿಕವಾಗಿ ಬಲಿಷ್ಟರಾಗುವ ಕಾರ್ಯವನ್ನು ಸರಕಾರಿ ನೌಕರರ ಸಂಘ ಮಾಡಬೇಕಿದೆ ಎಂದು ಮೂಡಿಗೆರೆ ತಹಸೀಲ್ದಾರ್ ರಾಜಶೇಖರ್ ಮೂರ್ತಿ ಹೇಳಿದರು.
ಅವರು ಸೋಮವಾರ ಸಂಜೆ ಮೂಡಿಗೆರೆ ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಏರ್ಪಡಿಸಿದ್ದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಘಟಕದ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
1983ರಲ್ಲಿ ರಾಜ್ಯಲ್ಲಿ 3 ಕೋಟಿ ಜನಸಂಖ್ಯೆಯಿತ್ತು. ಆಗ 6 ಲಕ್ಷ ನೌಕರರಿದ್ದರು. ಜನಸಂಖ್ಯೆ ಆಧಾರದ ಮೇಲೆ ಇಂತಿಷ್ಟೇ ಸರಕಾರಿ ನೌಕರರಿರಬೇಕೆಂಬ ನಿಯಮವಿದೆ. ಆದರೆ ರಾಜ್ಯದಲ್ಲಿ 6.5 ಕೋಟಿ ಜನಸಂಖ್ಯೆ ದಾಟಿದರೂ 6 ಲಕ್ಷ ನೌಕರರು ನಮ್ಮಲ್ಲಿ ಇಲ್ಲ. 2.86 ಲಕ್ಷ ಹುದ್ದೆ ಖಾಲಿ ಇದೆ. ಜನಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದರೂ ಜನರ ಬೇಡಿಕೆ ನಿರೀಕ್ಷೆಗೆ ತಕ್ಕಂತೆ ನೌಕರರು ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಸರಕಾರಿ ನೌಕರರ ಸಂಘದಲ್ಲಿ ನಿರ್ದೇಶಕ ಹಾಗೂ ಅಧ್ಯಕ್ಷರಾಗುವವರೆಗೆ ಇರುವ ಉತ್ಸಾಹ ನಂತರ ಇರುವುದಿಲ್ಲ. ಇದು ಆಗಬಾರದು. ಬಹುತೇಕ ನೌಕರರಿಗೆ ಬಜೆಟ್ ಸಿಸ್ಟಮ್ ಹೇಗೆ ಕೆಲಸ ಮಾಡುತ್ತದೆ? ಮಕ್ಕಳ ಭವಿಷ್ಯ, ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದು ಅರಿತುಕೊಳ್ಳಬೇಕು. ಕುಗ್ಗಿ ಹೋಗುವ ಮನಸ್ಥಿತಿಯಿಂದ ಹೊರ ಬರುವಂತೆ ಮನೋ ವೈಜ್ಞಾನಿಕ ತರಬೇತಿ ಕೊಡಿಸುವ ಕೆಲಸ ಸಂಘಟನೆಯಿಂದ ಆಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ನವೀನ್ ವಹಿಸಿದ್ದರು. ತಾ.ಪಂ. ಇಒ ದಯಾಪತಿ, ಬಿಇಒ ಮೀನಾಕ್ಷಿ, ಸಂಘದ ಕಾರ್ಯದರ್ಶಿ ಮಲ್ಲಪ್ಪ, ಖಜಾಂಚಿ ದಿನೇಶ್, ರಾಜ್ಯ ಪರಿಷತ್ ಸದಸ್ಯ ಪ್ರವೀಣ್, ಮಾಜಿ ಅಧ್ಯಕ್ಷ ಪದ್ಮರಾಜ್, ರಾಮೇಗೌಡ, ಕಸಾಪ ಕಸಬಾ ಹೋಬಳಿ ಅಧ್ಯಕ್ಷ ರವಿ ಕುನ್ನಹಳ್ಳಿ, ಕರ್ನಾಟಕ ಸಾಹಿತ್ಯ ಸಂಭ್ರಮ ವೇದಿಕೆ ಅಧ್ಯಕ್ಷ ಎಂ.ಎಸ್.ನಾಗರಾಜು ಮತ್ತಿತರರಿದ್ದರು.

ಇದೇ ಸಂದರ್ಭದಲ್ಲಿ ಪತ್ರಿಕಾ ವಿತರಕ ಜಾಹೀರ್ ಅವರನ್ನು ಗೌರವಿಸಲಾಯಿತು.


