ನೀರು ಸೇದುವಾಗ ಏಕಾಏಕಿ 60 ಅಡಿ ಆಳದ ಬಾವಿಗೆ ಬಿದ್ದಿದ್ದ 94 ವರ್ಷದ ವೃದ್ಧೆ ಪವಾಡಸದೃಶವಾಗಿ ಬದುಕಿಳಿದಿರುವ ಘಟನೆ ನಡೆದಿದೆ.
ಬಾವಿಗೆ ಬಿದ್ದಿದ್ದ ವೃದ್ಧೆಯನ್ನು ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಣೆ ಮಾಡಿರುವಂತಹ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಮರಕಟ್ಲೆ ಗ್ರಾಮದಲ್ಲಿ ನಡೆದಿದೆ.
ಬಾವಿಗೆ ಬಿದ್ದಿದ್ದ ವೃದ್ಧೆ ಕಮಲಾರನ್ನ ಹಗ್ಗದ ಸಹಾಯದಿಂದ ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಿಸಿದ್ದಾರೆ. ಗಾಯಾಳು ವೃದ್ಧೆಗೆ ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಗ್ರಾಮದ ಕಮಲ ಎಂಬ ವೃದ್ಧೆ ಆಯಾತಪ್ಪಿ ಜಾರಿ ಬಾವಿಗೆ ಬಿದ್ದಿದ್ದರು. ಅಷ್ಟು ಆಳಕ್ಕೆ ಬಿದ್ದರೂ ಯಾವುದೇ ಅಪಾಯ ಆಗದ ರೀತಿಯಲ್ಲಿ ನೀರಿನಲ್ಲಿ ಮುಳುಗದಂತೆ ಬಾವಿಯೊಳಗೆ ಪೈಪ್ ಹಿಡಿದುಕೊಂಡು ಒಂದು ಗಂಟೆಗೂ ಹೆಚ್ಚು ಕಾಲ ಅವರು ಸಾವು ಬದುಕಿನ ನಡುವೆ ಹೋರಾಡಿದ್ದಾರೆ. ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದೆ. ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ವೃದ್ಧೆಯನ್ನು ರಕ್ಷಿಸಿದ್ದಾರೆ.
94ರ ಹರೆಯದಲ್ಲಿ ವೃದ್ದೆಯ ಆರೋಗ್ಯ, ಅವರ ಸ್ಥೈರ್ಯವನ್ನು ಕಂಡು ಗ್ರಾಮಸ್ಥರು ಮತ್ತು ಅಗ್ನಿಶಾಮಕ ದಳದವರು ದಂಗಾಗಿದ್ದಾರೆ.



