September 12, 2026
;
kagga new

 

 

ನಿರೂಪಣೆ : ಡಾ. ಸುಧಾ ಹೆಚ್.ಎಸ್


ಸಂಸ್ಕøತ ಉಪನ್ಯಾಸಕರು,
ಮೈಸೂರು.
ಮೊ. 9448233119

ನಾವು ನಮ್ಮ ಸುತ್ತಲಿನ ಸೃಷ್ಟಿ ವೈಚಿತ್ರ್ಯಗಳನ್ನು ಗಮನಿಸುತ್ತಾ ಹೋದರೆ ಈ ಪ್ರಪಂಚದಲ್ಲಿ ಏನೆಲ್ಲ ಸೃಷ್ಟಿಯಾಗಿದೆ. ಈ ಕ್ರಿಮಿಗಳು ಪುಟ್ಟ ಪುಟ್ಟ ಕೀಟಗಳು, ಬಣ್ಣ ಬಣ್ಣದ ರೆಕ್ಕೆ ಹೊತ್ತು ತಿರುಗುವ ಪತಂಗಗಳು, ಗುಯ್ ಎಂದು ಶಬ್ದ ಮಾಡುವ ಜೀರುಂಡೆ, ಮಿಣಕ್ಕನೆ ಮಿಂಚಿನ ಬೆಳಕು ಕೊಡುವ ಮಿಣುಕು ಹುಳು, ವಟರ್ ವಟರ್ ಎಂದು ವಟಗುಡುವ ಕಪ್ಪೆ, ಹೀಗೆ ಒಂದೇ ಎರಡೇ.. ಲಕ್ಷಾಂತರ ಜೀವಿಯ ಬಗ್ಗೆ ಬರೆಯುತ್ತಾ ಸಾಗಿದರೆ ಬಹುಷಃ ಲೇಖನಿಯೇ ಸಾಕು ಬಿಡು ಸುಸ್ತಾದೆ ಎನ್ನಬೇಕೇನೋ ಅನ್ನಿಸುತ್ತದೆ.

ಇಂತಹ ವೈವಿದ್ಯಮಯ ಪ್ರಪಂಚದಲ್ಲಿ ವಿಚಾರವಂತಿಕೆ ಇಟ್ಟುಕೊಂಡಿರುವ ಮನುಜ ಸೃಷ್ಟಿಯು ಎಲ್ಲಕ್ಕಿಂತ ಮೇಲಿದೆ. ಏಕೆಂದರೆ ಅವನಿಗೆ ಈ ಎಲ್ಲ ಸೃಷ್ಟಿಯ ವಿವಿಧತೆಯನ್ನು ನೋಡಿ ಸವಿಯುವ ಭಾಗ್ಯ ದೇವರು ಕೊಟ್ಟಿದ್ದಾನೆ. ಪ್ರಪಂಚದಲ್ಲಿ ಎಷ್ಟು ಸೃಷ್ಟಿಯೋ ಅದೇ ರೀತಿ ಅಷ್ಟೇ ಪ್ರಮಾಣದಲ್ಲಿ ಲಯವೂ ಇದೆ. ಒಂದು ಹೋದರೆ ಹಿಂದೆಯೇ ಇನ್ನೊಂದು ಅಲೆ ಬಂದೇ ಬಿಡುತ್ತದೆ, ಇಷ್ಟು ಸಕ್ರಿಯವಾಗಿ ಈ ಸೃಷ್ಟಿಕಾರ್ಯದಲ್ಲಿ ತೊಡಗಿರುವ ಭಗವಂತ ಇಂದಿನ ಈ ಕಂಪ್ಯೂಟರ್‍ಗಿಂತಲೂ ಸಹ ಒಂದು ಕೈ ಮುಂದೆ ಇದ್ದಾನೆ ಅನ್ನುವುದರಲ್ಲಿ ಯಾವ ಅನುಮಾನವಿಲ್ಲ.

ಈ ಕಂಪ್ಯೂಟರ್ ನಮ್ಮ ಕಮಾಂಡಿಗೆ ಅನುಗುಣವಾಗಿ ಮಾಡುತ್ತದೆ. ಆದರೆ ಈ ಸೃಷ್ಟಿಕರ್ತ ನಮ್ಮ ಯಾವ ಕಮಾಂಡಿಗೂ ಸೊಪ್ಪು ಹಾಕುವವನಲ್ಲ. ಅವನ ಕಮಾಂಡಿಗೆ ನಾವು ತಲೆಬಾಗಲೇಬೇಕು. ಇಂತಹ ವೈವಿಧ್ಯಮಯ ಪ್ರಪಂಚದ ನಾಗಾಲೋಟದಲ್ಲಿ ನಾವು ಅದರ ವೇಗಕ್ಕನುಗುಣವಾಗಿ ಓಡಲಾರದೆ ಬೀಳುವುದೇ ಹೆಚ್ಚು. ಬಿದ್ದರೂ ಸಹ ಕೈ ಹಿಡಿದು ಎಬ್ಬಿಸುವ ಕಾಣದ ಕೈಯೊಂದು ಸಹ ಇಲ್ಲಿದೆ ಎಂದರೆ ಅತಿಶಯೋಕ್ತಿಯಲ್ಲ. ಏಕೆಂದರೆ ಆ ಅಭಯ ಹಸ್ತ ಇಲ್ಲವೆಂದಾದಲ್ಲಿ ಇಂದು ಪ್ರಪಂಚ ಈ ರೀತಿ ಇರುತ್ತಿರಲಿಲ್ಲ ಎನ್ನುವುದನ್ನು ಎಲ್ಲರೂ ಒಪ್ಪಬೇಕಾದ ಸತ್ಯವಾಗಿದೆ.

ಚಕ್ರೋಪಾದಿಯಲ್ಲಿ ತಿರುಗುತ್ತಾ ಇರುವ ಸೃಷ್ಟಿಚಕ್ರವು ಎಲ್ಲವನ್ನು ತನ್ನೊಳಗೆ ಸೇರಿಸಿಕೊಂಡರೂ ಸಹ ಅದೇ ರೀತಿ ಮರುಸೃಷ್ಟಿಯನ್ನು ಸಹ ಮಾಡುತ್ತಾ ಪ್ರಪಂಚವನ್ನು ಬೆಳೆಸುತ್ತಲೇ ಇದೆ. ಬೆಟ್ಟ-ಗುಡ್ಡ, ಭೂಮಿ ಎಲ್ಲವೂ ಹಳೆಯದ್ದೇ ಆಗಿದ್ದರೂ ಸಹ ಹೊಸದಾಗಿ ಬರುವ ವರ್ಷಧಾರೆ ಹೊಳೆಯ ನೀರು ಹಳೆಯದನ್ನು ಇಲ್ಲವಾಗಿಸಿ ಹೊಸತನ್ನು ತುಂಬುತ್ತಾ ಸಾಗುತ್ತಿದೆ. ಯಾವುದು ಎಷ್ಟು ಹೊಸತಾದರೂ ಸಹ ವಿಧಿಯ ಆಟದಿಂದ ತಪ್ಪಿಸಿಕೊಳ್ಳದಂತೆ ಒಂದು ಅಂಕುಶವನ್ನು ಕೂಡ ಇದು ಇಟ್ಟುಕೊಂಡೇ ಸಾಗುತ್ತದೆ

. “ಹಳೆ ಬೇರು ಹೊಸ ಚಿಗುರು” ಎಂಬಂತೆ ಎಲ್ಲವೂ ಹೊಸತರಂತೆ ಕಣ್ಣಿಗೆ ಗೋಚರಿಸುತ್ತದೆ ಅಷ್ಟೆ. ಹಳೆ ಬೇರಿನಿಂದ ಹೊರಟ ಚಿಗುರುಗಳು ಹೆಮ್ಮರವಾಗಿ ವಿಶ್ವವನ್ನು ಆವರಿಸುತ್ತಾ ಸಾಗುತ್ತದೆ. ಈ ಸೃಷ್ಟಿಯ ಬೆಳವಣಿಗೆಯ ಪರಿಯನ್ನು ಮಾನ್ಯ ಡಿ.ವಿ.ಜಿ.ಯವರು ಹೀಗೆನ್ನುತ್ತಾರೆ.

ತಲೆಯ ಮೇಗಡೆ ಬೇರು, ಕೆಳಗೆ ಕೊಂಬೆಲೆ ಚಿಗುರು|
ಬಿಳಲೊರೆಗಳ ಲೆಕ್ಕಕಿಲ್ಲ ಕೊನೆ ಮೊದಲು||
ಬೆಳೆವುದೀ ಪರಿಯರಳಿ ಮರದಂತೆ ನರಕೋಟಿ|
ನಲಿವನದರಲಿ ಬೊಮ್ಮ – ಮಂಕುತಿಮ್ಮ

ತಲೆಯ ಮೇಲೆ ಬೇರು, ಕೆಳಗೆ ಚಿಗುರು ಪುಟ್ಟ ಪುಟ್ಟ ಎಲೆಗಳು ಇವು ವಂಶವೃಕ್ಷ ಇದ್ದ ಹಾಗೆ. ಅಜ್ಜ-ಅಜ್ಜಿ ಮಕ್ಕಳು, ಮೊಮ್ಮಕ್ಕಳು ಹೀಗೆ ಸಂತತಿ ಲೆಕ್ಕವಿಲ್ಲದಷ್ಟು ಬಿಳಲುಗಳು ಇವಕ್ಕೆ ಕೊನೆ ಮೊದಲಿಲ್ಲ ಇದೊಂದು ಅರಳಿ ಮರ ಬೆಳೆದಂತೆ ಈ ನರಕೋಟಿ ಬೆಳೆಯುತ್ತಲೇ ಸಾಗಿದೆ. ಸೃಷ್ಟಿಕರ್ತ ಪರಬ್ರಹ್ಮ ಇದರಲ್ಲಿ ಆನಂದದಿಂದ ಇದ್ದಾನೆ.

ಈ ಜಗದ್ರೂಪಿ ಅಶ್ವತ್ಥವೃಕ್ಷದ ಸ್ವರೂಪದಲ್ಲಿ ನಮಗೆ ಆದಿಯಾಗಲಿ, ಅಂತ್ಯವಾಗಲಿ ಸಿಗುವುದಿಲ್ಲ. ಇದು ಪರಂಪರೆಯ ವಿಸ್ತಾರವನ್ನು ಪಡೆದುಕೊಂಡಿದೆ, ಗೀತೆಯಲ್ಲಿ ಶ್ರೀ ಕೃಷ್ಣನು ಸಹ ಈ ಪ್ರಪಂಚವನ್ನು ಅಶ್ವತ್ಥ ವೃಕ್ಷಕ್ಕೆ ಹೋಲಿಸಿ “ಊದ್ರ್ವಮೂಲ ಮಧಃಶಾಖಮಶ್ವತ್ಥಂ ಪ್ರಾಹುರವ್ಯಯಮ್” (ಆದಿ ಪುರುಷ ಪರಮೇಶ್ವರ ರೂಪಿ ಬುಡವುಳ್ಳ ಹಾಗೂ ಬ್ರಹ್ಮರೂಪೀ ಮುಖ್ಯ ಕೊಂಬೆಗಳುಳ್ಳ ಪ್ರಪಂಚರೂಪಿ ಅಶ್ವತ್ಥ ವೃಕ್ಷವನ್ನು ಅವಿನಾಶೀ) ಎಂದು ಹೇಳಿದ್ದಾನೆ.

ಈ ಪ್ರಪಂಚ ರೂಪೀ ಅಶ್ವತ್ಥ ವೃಕ್ಷವು ವಿಷಯ ಭೋಗಗಳಿಂದ ಕೆಳಗೆ ಮೇಲೆ ಎಲ್ಲೆಲ್ಲಿಯೂ ಹರಡಿಕೊಂಡಿದ್ದು ಸಂಸಾರ ಬಂಧನವನ್ನು ತಲೆಮಾರುಗಳಿಂದ ತಲೆಮಾರಿಗೆ ತಂದುಕೊಟ್ಟು ಅವರವರ ಕರ್ಮಗಳಿಗನುಸಾರವಾಗಿ ನಮ್ಮನ್ನು ಭವಪಾಶದಲ್ಲಿ ಬಂಧಿಸಿದೆ. ಈ ಬಂಧನದಿಂದ ಬಿಡಿಸಿಕೊಂಡು ಹೊರಬರುವುದು ಅಷ್ಟು ಸುಲಭದ ಮಾತಲ್ಲ, ಪ್ರಯತ್ನಪೂರ್ವಕವಾಗಿ ಎಲ್ಲೋ ಬೆರಳೆಣಿಕೆಯಷ್ಟು ಜನ ಮಾತ್ರ ಈ ಪ್ರಾಪಂಚಿಕ ವಿಷಯ ಭೋಗಗಳನ್ನು ತೊರೆದು ಹೊರಬಂದಾರು. ಆದರೆ ಈ ಪಾಶದಲ್ಲಿ ಸಿಲುಕಿ ನರಳುವವರೇ ಹೆಚ್ಚು ಜನರು. ಇದು ಪರಂಪರಾನುಗತವಾಗಿ ಸಾಗಿ ಬರುತ್ತಲೇ ಇದೆ. ಈ ಬಂಧನದಲ್ಲಿ ಲೋಕದ ಜೀವಿಯನ್ನು ಸಿಲುಕಿಸಿದ ಪರಮಾತ್ಮ ಮಾತ್ರ ಲೋಕದಾಟದಲ್ಲಿ ಮೈಮರೆತು ಆನಂದದಿಂದ ವಿರಾಜಮಾನ ನಾಗಿದ್ದಾನೆ.

ವಾಸ್ತವವಾಗಿ ಈ ಪ್ರಪಂಚ ಸುಖಮಯ ಎಂಬ ಭ್ರಮೆಯಲ್ಲಿ ಮನುಜರನ್ನು ಮುಳುಗಿಸಿದ್ದಾನೆ. ಆದ್ದರಿಂದ ಲೋಭ, ಮೋಹದಲ್ಲಿ ಸಿಲುಕಿದ ನಾವು ನಮ್ಮತನವನ್ನು ಮರೆತು ದುರಾಸೆ, ದುರ್ಬುದ್ಧಿಗಳಲ್ಲಿ ತೊಡಗಿಸಿಕೊಂಡು ಪ್ರಪಂಚವನ್ನೇ ಗೆಲ್ಲುತ್ತೇವೆ ಎಂಬ ಅಹಂಕಾರದಲ್ಲಿ ಮೆರೆಯುತ್ತೇವೆ. ಆದರೆ ಸೂತ್ರಧಾರನಾದ ಭಗವಂತ ನಮ್ಮ ಪಾಪದ ಕೊಡ ತುಂಬುವಲ್ಲಿಯವರೆಗೂ ಕಾಯುತ್ತಿದ್ದು ನಂತರ ಅದನ್ನು ಕೆಡವಿ ಗರ್ವವನ್ನು ಮುರಿಯುತ್ತಾನೆ. ಆಗಲೂ ಸಹ ಎಚ್ಚೆತ್ತುಕೊಳ್ಳದ ಮನುಜನಿಗೆ ಅವನ ಕರ್ಮವನ್ನು ಜನ್ಮಾಂತರಗಳಿಗೆ ಹೊತ್ತೊಯ್ಯವಂತೆ ಮಾಡುತ್ತಾನೆ, ಹಾಗಾಗಿ ಈ ಹುಟ್ಟು-ಸಾವು ನಿರಂತರವಾಗಿ ಸಾಗುತ್ತಲೇ ಇರುತ್ತದೆ ಹೇಗೆಂದರೆ –

ಒಂದು ಕೊಂಬೆಯು ಬಾಡಲಿನೊಂದು ಚಿಗುರುವುದು|
ಸಂದಿಹುದು ಚಿರನವತೆಯಶ್ವತ್ಥ ಮರಕೆ||
ಎಂದೆಂದುಮಂತಿರುವುದೀ ವಿಶ್ವವಕ್ಷವದ|
ರೊಂದು ರೆಂಬೆಯೋ ನೀನು – ಮಂಕುತಿಮ್ಮ ||

ಈ ಸೃಷ್ಟಿಯೆಂಬ ವೃಕ್ಷದಲ್ಲಿ ಒಂದು ಕೊಂಬೆ ಬಾಡಿ ಸತ್ತುಹೋಯಿತೆಂದರೆ ಪಕ್ಕದಲ್ಲೇ ಇನ್ನೊಂದು ಚಿಗುರು ಹುಟ್ಟಿ ಮರವನ್ನು ಹೊಸತಾಗಿರುವಂತೆ ಮಾಡುತ್ತದೆ, ಈ ರೀತಿ ವಿಶ್ವವೆಂಬ ಮರ ನಿಶ್ಚಲವಾಗಿರುತ್ತದೆ ನೀನು ಅದರ ಒಂದು ರೆಂಬೆ ಮಾತ್ರ.

ಪರಮಾತ್ಮನಿಂದ ಈ ಪುರಾತನ ಪ್ರಪಂಚರೂಪಿ ವೃಕ್ಷದ ಪ್ರವೃತ್ತಿಯು ಹೇಗೆ ವಿಸ್ತಾರಗೊಂಡು ಸಾಗುತ್ತಿದೆಯೋ ಅದರಲ್ಲಿ ನಮ್ಮ ನಮ್ಮ ಜೀವನ ಎಂಬುದು ಒಂದು ರೆಂಬೆ ಮಾತ್ರ, ಇದು ಯಾವಾಗ ಬೇಕಾದರೂ ಬಾಡಬಹುದು ಅಥವಾ ಮುರಿದು ಬೀಳಬಹುದು ಆದ್ದರಿಂದ ಮುರಿದು ಬೀಳುವುದರೊಳಗೆ ಈ ಜೀವನವನ್ನು ಅನುಭವಿಸಬೇಕು. ಹೇಗೆಂದರೆ ಪ್ರಕೃತಿ ನಿಯಮಕ್ಕೆ ಅಡ್ಡಿಯಾಗದ ತೆರದಿ ಬದುಕನ್ನು ನಿಸ್ವಾರ್ಥ ಮನೋಭಾವದಿಂದ ಸಾಗಿಸಬೇಕು, ಅಜ್ಞಾನದಿಂದ ನಮ್ಮಲ್ಲಿ ತುಂಬಿಕೊಂಡ ಅಹಂಕಾರ, ಮಮಕಾರ ಸ್ವಾರ್ಥ ಮನೋಭಾವ ಇವುಗಳನ್ನು ಬುಡಸಹಿತವಾಗಿ ತ್ಯಜಿಸಿ, ಸತ್ ಚಿಂತನೆಗಳಲ್ಲಿ ಮನವನ್ನು ತೊಡಗಿಸಿಕೊಳ್ಳುತ್ತಾ ಆದಷ್ಟೂ ಪರರಿಗೆ ದ್ರೋಹವನ್ನು ಮಾಡದೆ, ಕೈಯಲ್ಲಾದ ಸಹಾಯ ಸೇವೆಯನ್ನು ನಿರ್ಮಲವಾದ ಮನಸ್ಸಿನಿಂದ ಮಾಡುತ್ತಾ ಸೃಷ್ಟಿಕರ್ತನ ಉಪಕಾರವನ್ನು ಸ್ಮರಿಸಿ ಅವನಲ್ಲಿ ಶರಣಾಗತಿಯನ್ನು ಹೊಂದುವ ಮಾರ್ಗದ ಶೋಧನೆಯನ್ನೂ ಮಾಡಿಕೊಂಡು ಅವನ ಸೇವೆಯಲ್ಲಿ ತೊಡಗಬೇಕು.

ಈ ಪ್ರಪಂಚ ಮೂರು ದಿನದ ಸಂತೆ ಎಂಬ ಸತ್ಯದ ಅರಿವನ್ನು ಪಡೆದುಕೊಳ್ಳಬೇಕು “ಅಲ್ಲಿದೆ ನಮ್ಮನೆ ಇಲ್ಲಿರುವುದು ಸುಮ್ಮನೆ” ಎಂಬ ದಾಸರವಾಣಿಯಂತೆ ವಿಷಯ ಭೋಗಗಳಿಗೆ ಅಂಟಿಕೊಳ್ಳದೆ ಜೀವನವನ್ನು ಕಳೆಯಬೇಕು. ಈ ಜೀವನ ತತ್ತ್ವವನ್ನು ಇಲ್ಲಿ ಡಿ.ವಿ.ಜಿ.ಯವರು ಹೇಳುತ್ತಿದ್ದಾರೆ –

ಅಂದಂದಿಗಾದನಿತು ಬುಡ ಕಟ್ಟಿ ಕಳೆ ತೆಗೆದು|
ಚೆಂದಳಿರು ದಿನದಿನ ಮುಮೊಗೆಯೆ ನೀರೆರೆದು||
ಸಂದ ಬಲದಿಂದ ಜಗದಶ್ವತ್ಥ ಸೇವೆಯಲಿ|
ನಿಂದಿರುವುದಲೆ ಧರ್ಮ – ಮಂಕುತಿಮ್ಮ ||

ಅವತ್ತವತ್ತಿಗೆ ಆದಷ್ಟು ಪಾತಿ ಮಾಡಿ, ನೀರು ನಿಲ್ಲಲು ಕಟ್ಟೆ ಕಟ್ಟಿ, ಕಳೆ ತೆಗೆದು, ಕೆಂಪಾದ ಚಿಗುರು ದಿನ ದಿನವು ಹುಟ್ಟಲು ನೀರೆರೆದು ಈ ರೀತಿಯಾಗಿ ಒದಗಿದ ಶಕ್ತಿಯಿಂದ ಈ ಜಗತ್ತೆಂಬ ಅಶ್ವತ್ಥ ಮರದ ಸೇವೆಯನ್ನು ಮಾಡುತ್ತಿರುವುದೇ ನಮ್ಮ ಧರ್ಮ.

ಈ ಮೇಲಿನ ಕಗ್ಗದ ನಾಲ್ಕು ಸಾಲಿನಲ್ಲಿ ಜೀವನದ ತತ್ತ್ವವೇ ಅಡಗಿದೆ. ನಾವು ಹೇಗೆ ಜೀವನ ಮಾಡಬೇಕು ಎಂಬ ಅರಿವನ್ನು ನೀಡುವಂತಹ ಅಮೂಲ್ಯವಾದ ಮಾತುಗಳು ಇಲ್ಲಿವೆ. ಅತಿಯಾದ ದುರಾಸೆಗೊಳಗಾಗದೆ ಎಷ್ಟು ಬೇಕೋ ಅಷ್ಟನ್ನೇ ಸಂಗ್ರಹ ಮಾಡು, ಕಟ್ಟತನವೆಂಬ ಕಳೆಯನ್ನು ತೆಗೆದು, ಒಳ್ಳೆಯತನದ ಸೊಗಡನ್ನು ತುಂಬುತ್ತಾ ಬಂದು ಮುಂಬರುವ ನವ ಪೀಳಿಗೆಗೆ ಉತ್ತಮ ಸಂಸ್ಕಾರಯುತವಾದ ಜೀವನವನ್ನು ನಡೆಸುವ ಸನ್ಮಾರ್ಗವನ್ನು ತೋರಿಸುವ ಕೆಲಸವನ್ನು ಮಾಡಿದೆಯೆಂದಾದರೆ ಅದೇ ನಮ್ಮ ಧರ್ಮಾನುಷ್ಠಾನ ಸೇವೆ. ಇದಕ್ಕಿಂತ ಮಿಗಿಲಾದ ಸೇವೆಯೇ ಬೇಡ. ಏಕೆಂದರೆ ಮುಂದಿನ ಜನಾಂಗಕ್ಕೆ, ಸಮಾಜಕ್ಕೆ ಬೆಳಕು ತೋರಿಸುವ ಕೆಲಸ ಮಾಡಿದೆವಾದರೆ ಅದು ತಲತಲಾಂತರವಾಗಿ ಬೆಳೆಯುತ್ತದೆ.

ಸಂಸ್ಕಾರವೆಂಬ ಬೇರು ಗಟ್ಟಿಯಾಗಿದ್ದಲ್ಲಿ ಚಿಗುರುವ ಎಲೆಗಳು ಹೊಸತನವನ್ನು ತುಂಬಿಕೊಂಡು ಬಂದರೂ ಸಹ ಸಂಸ್ಕಾರದ ನೆರಳಿನಲ್ಲಿ ಬೆಳೆದು ಸನ್ಮಾರ್ಗದತ್ತ ಸಾಗುತ್ತವೆ. ಆದ್ದರಿಂದ ನಮ್ಮ ಧರ್ಮವೇನೆಂದರೆ ನಮ್ಮ ಮುಂದಿನ ಜನಾಂಗಕ್ಕೆ ಆದಷ್ಟು ಸದ್ವಿದ್ಯೆ, ಸಧೃಡತೆ, ಧರ್ಮ, ಅನುಷ್ಠಾನ ಸತ್ಯಸಂದತೆಯನ್ನು ತುಂಬುವ ಕಾಯಕ ಇದು ಮನೆ ಮನೆಯಲ್ಲೂ ಆದಾಗ ಮಾತ್ರ ಮನೆ-ಸಮಾಜ-ದೇಶ ಸದೃಢವಾಗಿ ಬೆಳೆಯಬಲ್ಲದು, ಸದೃಢ ದೇಶವನ್ನು ಕಟ್ಟುವುದೇ ನಮ್ಮ ದೇಶ ಸೇವೆಯಾಗಿದೆ. ಇದಕ್ಕಿಂತ ಹೆಚ್ಚಿನ ಸಮಾಜ ಸೇವೆ ಬೇಕಾಗಿಯೇ ಇಲ್ಲ. “ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ” ಎಂಬಂತೆ ನಮ್ಮ ಹೆತ್ತ ತಾಯಿ, ಜನ್ಮಭೂಮಿ ಎರಡೂ ಸಹ ಮನುಷ್ಯನಿಗೆ ಸ್ವರ್ಗಕ್ಕಿಂತ ಮಿಗಿಲಾದುದು.

ಆದ್ದರಿಂದ ಪ್ರತಿಯೊಬ್ಬರು ಸಹ ನಮ್ಮ ನಮ್ಮ ಕೈಲಾದಷ್ಟು ಸುಸಂಸ್ಕಾರವನ್ನು ಮಕ್ಕಳಿಗೆ ನೀಡುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯವನ್ನು ತುಂಬಿ ಉತ್ತಮ ವ್ಯಕ್ತಿಯಾಗುವಂತೆ ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನಶೀಲರಾಗುತ್ತಾ ನಾಲ್ಕು ಸಾಲಿನಲ್ಲಿ ಪ್ರಪಂಚದ ಜ್ಞಾನವನ್ನು ತುಂಬಿಕೊಟ್ಟ ಕಗ್ಗದ ಕವಿಗೊಂದು ನಮನ ಸಲ್ಲಿಸಿ ಕೃತಾರ್ಥರಾಗೋಣ.
************

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;