ವಿವಾಹ ಶಾಸ್ತ್ರ ನಡೆಯುತ್ತಿದ್ದ ಸಂದರ್ಭ ವಧುವಿನ ಕೊಠಡಿಯಿಂದ ಚಿನ್ನಾಭರಣ ಮತ್ತು ನಗದನ್ನು ಕಳವು ಮಾಡಿದ ಪ್ರಕರಣವನ್ನು ಬೇಧಿಸಿರುವ ಕೊಡಗು ಜಿಲ್ಲಾ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕುಶಾಲನಗರ ಸಮೀಪದ ತೊರೆನೂರು ನಿವಾಸಿ ಚರಣ್ ಕುಮಾರ್(19), ಗೋಣಿಮರೂರು ಗ್ರಾಮದ ನಿವಾಸಿ ನಿತಿನ್ ಎಸ್.ಎಲ್.(22) ಹಾಗೂ ಅರಿಶಿನಕುಪ್ಪೆ ನಿವಾಸಿ ನಿವಾಸಿ ಮಿಥುನ್(24) ಎಂಬುವವರೇ ಬಂಧಿತ ಆರೋಪಿಗಳು.
ಕುಶಾಲನಗರದ ರೈತ ಭವನದಲ್ಲಿ ನವೆಂಬರ್ 28 ರಂದು ನಳಿನಿ ಎಂಬುವವರ ಮಗಳ ವಿವಾಹ ಶಾಸ್ತ್ರ ನಡೆಯುತಿತ್ತು. ಈ ಸಂದರ್ಭ ವಧುವಿನ ಕೊಠಡಿಯಲ್ಲಿದ್ದ 28 ಗ್ರಾಂ ಚಿನ್ನಾಭರಣ ಮತ್ತು 5 ಸಾವಿರ ರೂ. ನಗದು ಕಳವಾಗಿತ್ತು. ಈ ಬಗ್ಗೆ ನಳಿನಿ ಅವರು ನೀಡಿದ ದೂರನ್ನು ಆಧರಿಸಿ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಚಿನ್ನ ಸಹಿತ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸೋಮವಾರಪೇಟೆ ಉಪವಿಭಾಗದ ಡಿವೈಎಸ್‍ಪಿ ಆರ್.ವಿ.ಗಂಗಾಧರಪ್ಪ, ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯ ಪಿಐ ಪ್ರಕಾಶ್ ಬಿ.ಜಿ., ಕುಶಾಲನಗರ ಪಟ್ಟಣ ಪೊಲೀಸ್ ಠಾಣಾ ಪಿಎಸ್‍ಐ ಹೆಚ್.ಟಿ.ಗೀತಾ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಇನ್ನೂ ಪತ್ತೆಯಾಗದ ಹಾಂದಿ ಪ್ರಕರಣ :
ಇಂತಹುದೇ ಪ್ರಕರಣವೊಂದು ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಠಾಣಾ ವ್ಯಾಪ್ತಿಯ ಹಾಂದಿ ಗ್ರಾಮದಲ್ಲಿ ಕಳೆದ ತಿಂಗಳು ನಡೆದಿತ್ತು. ಹಾಂದಿ ರಾಯಲ್ ಶಾಲಿಮಾರ್ ಮದುವೆ ಹಾಲ್ ನಲ್ಲಿ ವಿವಾಹ ಸಂದರ್ಭದಲ್ಲಿ ಕಿಟಕಿಯಿಂದ ನುಸುಳಿ ವಧುವಿನ ಕೊಠಡಿಯಲ್ಲಿದ್ದ ಸುಮಾರು 3 ಲಕ್ಷ ಬೆಲೆಬಾಳುವ ಚಿನ್ನಾಭರಣ ಕಳ್ಳತನ ಮಾಡಲಾಗಿತ್ತು. ಸಿಸಿ ಕ್ಯಾಮರದಲ್ಲಿ ಶಂಕಿತರ ಸುಳಿವು ಸಿಕ್ಕಿದ್ದರೂ ಇದರೂವರೆಗೆ ಆರೋಪಿಗಳ ಪತ್ತೆಯಾಗಿಲ್ಲ.



