ambedkar_page-0001

 

 

ಡಾ.ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿ ತೆರವುಗೊಳಿಸುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಮೂಡಿಗೆರೆ ಪಟ್ಟಣದಲ್ಲಿ ಶನಿವಾರ ಸಂಜೆ ಗಲಭೆ ನಡೆದಿದ್ದು, ಪೋಲಿಸರ ಮುನ್ನೆಚ್ಚರಿಕೆ ಕ್ರಮದಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ತಡೆದಿದ್ದಾರೆ.

ಜನವರಿ 3ರಂದು ಭೀಮ ಕೋರೆಂಗಾವ್ ವಿಜಯೋತ್ಸವ ಸಮಿತಿ ವತಿಯಿಂದ ಪಟ್ಟಣದ ಲಯನ್ಸ್ ವೃತ್ತದಲ್ಲಿ ಭೀಮ ಕೋರೆಂಗಾವ್ ವಿಜಯೋತ್ಸವ ಆಚರಿಸಲಾಯಿತು. ಆ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಪುತ್ಥಳಿಯನ್ನು ಕಾರ್ಯಕ್ರಮಕ್ಕೆ ಸೀಮಿತವಾಗಿ ಪುಷ್ಪಾರ್ಚನೆ ಮಾಡಲು ವೇದಿಕೆ ಪಕ್ಕದಲ್ಲಿ  ಪ್ರತಿಷ್ಠಾಪಿಸಲಾಗಿತ್ತು. ಶನಿವಾರ ಬೆಳಗ್ಗೆ ವೇದಿಕೆ ಸಂಪೂರ್ಣ ತೆರವುಗೊಳಿಸಿದ್ದರೂ ಅಂಬೇಡ್ಕರ್ ಪುತ್ಥಳಿ ಮಾತ್ರ ತೆರವುಗೊಳಿಸದೇ ಹಾಗೆಯೇ ಬಿಡಲಾಗಿತ್ತು.

ಜ.10ರಂದು ಭೀಮ ಕೋರೆಂಗಾವ್ ವಿಜಯೋತ್ಸವಕ್ಕೆ ಸಿದ್ಧತೆ ಮಾಡಿಕೊಂಡಿದ್ದ ಇನ್ನೊಂದು ಭೀಮ ಕೋರೆಂಗಾವ್ ಆಚರಣೆ ಸಂಘದ ಸದಸ್ಯರು, ಜ.10ಕ್ಕೆ ಏರ್ಪಡಿಸಿದ್ದ ಭೀಮ ಕೋರೆಂಗಾವ್ ವಿಜಯೋತ್ಸವ ಕಾರ್ಯಕ್ರಮವನ್ನು ಇದೇ ಅಂಬೇಡ್ಕರ್ ಪುತ್ಥಳಿ ಮುಂದೆ ವೇದಿಕೆ ಹಾಕಲು ಚಿಂತನೆ ನಡೆಸಿದ್ದರು. ಅಲ್ಲದೇ ಶನಿವಾರ ಸಂಜೆ ಮಾಜಿ ಸಚಿವ ಬಿ.ಬಿ.ನಿಂಗಯ್ಯ ಅವರ ಸಮ್ಮುಖದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಹಾರ ಹಾಕಿ, ನಂತರ ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಗಿತ್ತು.

ಶನಿವಾರ 8ಗಂಟೆಗೆ ಜ.3ರಂದು ನಡೆಸಿದ ಭೀಮ ಕೋರೆಂಗಾವ್ ಸಮಿತಿ ಪದಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಅಂಬೇಡ್ಕರ್ ಪುತ್ಥಳಿ ಕಾರ್ಯಕ್ರಮಕ್ಕಾಗಿ ಮಾತ್ರ ಪ್ರತಿಷ್ಟಾಪಿಸಲಾಗಿತ್ತು. ಪಟ್ಟಣದಲ್ಲಿ ಅಂಬೇಡ್ಕರ್ ಪುತ್ಥಳಿ ಪ್ರತಿಷ್ಠಾಪಿಸಲು ಈ ಹಿಂದೆಯೇ ಪ.ಪಂ.ಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಜಾಗ ಗುರುತು ಮಾಡಿರಲಿಲ್ಲ. ಹಾಗಾಗಿ ಉತ್ತಮ ಸ್ಥಳದಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಮಾಡಲು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ. ಈಗ ತೆರವುಗೊಳಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಿದರು.

ಆಗ ಪೊಲೀಸರು ಪುತ್ಥಳಿ ತೆರವುಗೊಳಿಸಲು ಮುಂದಾದಾಗ ಕೆಲ ದಲಿತ ಮುಖಂಡರು ಅಂಬೇಡ್ಕರ್ ಪುತ್ಥಳಿಯನ್ನು ಕಾರ್ಯಕ್ರಮಕ್ಕೆ ಮಾತ್ರ ಬಳಸಿಕೊಂಡಿದ್ದರೆ, ಕಾರ್ಯಕ್ರಮ ಮುಗಿದ ಕೂಡಲೇ ತೆರವುಗೊಳಿಸಬೇಕಿತ್ತು. ಮರುದಿನ ಸಂಜೆ ಕಳೆದರೂ ಹಾಗೆಯೇ ಯಾಕೆ ಬಿಟ್ಟಿದ್ಯಾಕೆ? ಪುತ್ಥಳಿಯನ್ನು ಯಾರೂ ತೆರವುಗೊಳಿಸಬಾರದೆಂದು ಪಟ್ಟು ಹಿಡಿದರು. ಆಗ ಎರಡೂ ಗುಂಪುಗಳ ನಡುವೆ ಗಲಭೆ ಸೃಷ್ಟಿಯಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಪೊಲೀಸರ ಸಮಯ ಪ್ರಜ್ಞೆಯಿಂದ ಗಲಭೆ ತಿಳಿಗೊಳಿಸಿದರು.

ಈ ಸಂದರ್ಭದಲ್ಲಿ ಸಿಪಿಐ ಸೋಮೇಗೌಡ ಮಾತನಾಡಿ, ನಾಳೆ ತಹಸೀಲ್ದಾರ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಉತ್ತಮ ಸ್ಥಳದಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಿಸಲು ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿಕೊಂಡರು. ಅದಕ್ಕೆ ಒಪ್ಪಿ ಅಲ್ಲಿದ್ದ ಅಂಬೇಡ್ಕರ್ ಪುತ್ಥಳಿ ತೆರವುಗೊಳಿಸಲು ಅನುವು ಮಾಡಿಕೊಟ್ಟರು.

ಈ ವಿಚಾರವಾಗಿ ಮೂಡಿಗೆರೆಯಲ್ಲಿ ಬಿಗುವಿನ ವಾತಾವರಣವಿದ್ದು, ಜನವರಿ 10ರಂದು ಮತ್ತೊಂದು ಗುಂಪು ಭೀಮಾ ಕೋರೆಂಗಾವ್ ವಿಜಯೋತ್ಸವಕ್ಕೆ ಸಿದ್ಧತೆ ಮಾಡಿಕೊಂಡಿದೆ. ಮುಂಜಾಗೃತ ಕ್ರಮವಾಗಿ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಮೂಡಿಗೆರೆಯಲ್ಲಿ ಭೀಮಾ ಕೋರಂಗಾವ್ ವಿಜಯೋತ್ಸವ ಆಚರಣೆ ಸಂಬಂಧ ದಲಿತ ಸಮುದಾಯದಲ್ಲಿಯೇ ಎರಡು ಗುಂಪುಗಳು ಸೃಷ್ಠಿಯಾಗಿದ್ದು, ಎರಡು ಗುಂಪುಗಳು ಪ್ರತ್ಯೇಕವಾಗಿ ಕಾರ್ಯಕ್ರಮ ಆಯೋಜಿಸಿರುವುದು ಪಟ್ಟಣದಲ್ಲಿ ತೀವ್ರ ಗೊಂದಲಕ್ಕೆ ಕಾರಣವಾಗಿದೆ. ಶೋಷಿತ ಸಮುದಾಯದ ಸ್ವಾಭಿಮಾನ ಮತ್ತು ಒಗ್ಗಟ್ಟಿಗೆ ಪ್ರೇರಣೆ ಎಂದು ಹೇಳಿಕೊಳ್ಳಲಾಗುತ್ತಿರುವ ಭೀಮಾ ಕೋರೆಂಗಾವ್ ಕಾರ್ಯಕ್ರಮ ಮೂಡಿಗೆರೆ ಮಟ್ಟಿಗೆ ಸಮುದಾಯದ ನಡುವೆ ಬಿರುಕಿಗೆ ಕಾರಣವಾಗಿದ್ದು, ಅದೀಗ ಬೀದಿರಂಪವಾಗಿ ಮಾರ್ಪಟ್ಟಿದೆ. ಕ್ರಮೇಣ ಇದು ರಾಜಕೀಯ ಬಣ್ಣ ಪಡೆದುಕೊಳ್ಳುತ್ತಿದ್ದು, ದಲಿತ ಯುವಕರು ರಾಜಕೀಯ ಬಣಗಳಾಗಿ ವಿಂಗಡಣೆಯಾಗುತ್ತಿರುವುದು ವಿಪರ್ಯಾಸ ಎಂದು ಸಮುದಾಯದ ಹಿರಿಯರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ