ಮಲೆನಾಡಿನ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಾಡಾನೆ ದಾಳಿಗೆ ಈಗಾಗಲೇ ಹಲವಾರು ರೈತ ಬೆಳೆಗಾರರು,ಕಾರ್ಮಿಕರು, ಸಾರ್ವಜನಿಕರು ಸಾವನಪ್ಪಿರುತ್ತಾರೆ. ಜೊತೆಗೆ ಅಪಾರ ಪ್ರಮಾಣದ ಬೆಳೆ,ಆಸ್ತಿಪಾಸ್ತಿ ಹಾನಿಯಾಗುತ್ತಿದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣ ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ; ಕಾಫಿ ಕಟಾವು ಮಾಡುವ ಸಂದರ್ಭದಲ್ಲಿ ಕಾರ್ಮಿಕರು ಪ್ರಾಣ ಭಯದಿಂದ ಕಾಫಿ ಕಟಾವಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿಕೊಡುವಂತೆ ಕರ್ನಾಟಕ ಬೆಳೆಗಾರರ ಒಕ್ಕೂಟ ಹಿಂದಿನಿಂದಲೂ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೇ ಮನವಿ ಮಾಡುತ್ತಲೇ ಬಂದಿದ್ದು, ಈವರೆಗೆ ಯಾವುದೇ ಪರಿಹಾರ ದೊರಕಿಲ್ಲ.
ಭಾನುವಾರ ಚಿಕ್ಕಮಗಳೂರು ಜಿಲ್ಲೆ ಆಲ್ದೂರು ಹೋಬಳಿ ಹುಕ್ಕುಂದ ಗ್ರಾಮದ ಸಮೀಪ ನಾರಾಯಣ ಗೌಡ ಎಂಬುವವರು ಕಾಫಿಯನ್ನು ರಕ್ಷಣೆ ಮಾಡಿಕೊಳ್ಳಲು ಕಣದಲ್ಲಿ ಮಲಗಿದ ಸಂದರ್ಭದಲ್ಲಿ ಬೆಳಗಿನ ಜಾವ ಸುಮಾರು 5 ಗಂಟೆ ಸಮಯದಲ್ಲಿ ಮಲಗಿದವರನ್ನು ಆನೆಯ ಸೊಂಡಿಲಿನಿಂದ ಎತ್ತಿ ಬಿಸಾಕಿದೆ. ನಾರಾಯಣ ರವರು ಹುಲ್ಲಿನ ಮೇಲೆ ಬಿದ್ದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಅವರಿಗೆ ತಲೆ ಮತ್ತು ಕಾಲುಗಳಿಗೆ ಪೆಟ್ಟು ಬಿದ್ದಿದ್ದರಿಂದ ತಕ್ಷಣ ಗ್ರಾಮಸ್ಥರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ ಕೂಡಲೇ ಅರಣ್ಯ ಇಲಾಖೆಯಿಂದ ಬಂದು ನಾರಾಯಣ ಗೌಡರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ.
ಕಾಡಾನೆ ಸಮಸ್ಯೆಯಿಂದ ಬೆಳೆಗಾರರು ಭಯಭೀತರಾಗಿದ್ದಾರೆ. ಕಾಡಾನೆ ಸಮಸ್ಯೆಯಿಂದ ತೋಟದಲ್ಲಿ ಕೆಲಸ ಕಾರ್ಯಗಳು ಕುಂಠಿತಗೊಂಡು, ಹಾಗೂ ಬೆಳೆ ನಷ್ಟವಾಗಿ ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದಾರೆ. ಜೊತೆಗೆ ಪ್ರಾಣ ಭಯದಿಂದ ಜೀವನ ಸಾಗಿಸುತ್ತಿದ್ದಾರೆ.
ಆಲ್ದೂರು ಸುತ್ತಮುತ್ತಲ ಗ್ರಾಮಗಳಲ್ಲಿ ಸಂಚರಿಸುತ್ತಿರುವ ಒಂಟಿ ಸಲಗವನ್ನು ಅರಣ್ಯ ಇಲಾಖೆಯವರು ಕೂಡಲೇ ಹಿಡಿದು ಈ ಪ್ರದೇಶದಿಂದ ಸ್ಥಳಾಂತರ ಮಾಡಬೇಕೆಂದು ಆಗ್ರಹಿಸಿದ್ದಾರೆ.



