ವಿಶೇಷ ಚೇತನ ಮಕ್ಕಳು ನಡೆದಾಡುವ ದೇವರು. ಆಶಾಕಿರಣ ಅಂಧ ಮಕ್ಕಳ ಪಾಠ ಶಾಲೆಯು ವಿಶೇಷ ಚೇತನರ ಏಳಿಗೆಗೆ ಶ್ರಮಿಸುತ್ತಿದೆ. ಪೋಷಕರು ತಮ್ಮ ವಿಕಲ ಚೇತನ ಮಕ್ಕಳನ್ನು ಈ ಶಾಲೆಗೆ ದಾಖಲಿಸಿ ಅವರ ಉತ್ತಮ ಭವಿಷ್ಯಕ್ಕೆ ಸಹಕರಿಸಬೇಕು ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಹಾಂತೇಶ್ ಭಜಂತ್ರಿ ಹೇಳಿದರು.
ನಗರದ ಆಶಾಕಿರಣ ಅಂಧ ಮಕ್ಕಳ ವಸತಿಯುತ ಪಾಠ ಶಾಲೆಯಲ್ಲಿ ಆಯೋಜಿಸಿದ್ದ 35ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು. ಮಕ್ಕಳು ದೇವರ ಸಮಾನರು ಅವರ ಸೇವೆ ನಿರ್ವಹಿಸುವುದು ಪ್ರತಿಯೊಬ್ಬರ ಕರ್ತವ್ಯ, ಅಂಧರು ಸೇರಿದಂತೆ ವಿಶೇಷ ಚೇತನ ಮಕ್ಕಳ ಆರೈಕೆ, ಶಿಕ್ಷಣ, ಸದೃಡ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯೊಂದಿಗೆ ಮಕ್ಕಳನ್ನು ಉತ್ತಮ ವಾತಾವರಣದಲ್ಲಿ ಬೆಳೆಸುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯವಾದುದು ಎಂದರು.
ಶಾಲೆಯ ಅಧ್ಯಕ್ಷರಾದ ಜೆ.ಪಿ ಕೃಷ್ಣೇಗೌಡರು ಸೇರಿದಂತೆ ಅವರ ಕುಟುಂಬವು ಸಂಸ್ಥೆಯ ಹಾಗೂ ಮಕ್ಕಳ ಅಭಿವೃದ್ಧಿಗೆ ಸಧಾ ದುಡಿಯುತ್ತಿದ್ದಾರೆ. ಇವರೊಂದಿಗೆ ಇಲಾಖೆಯು ಸಕಲ ಸೌಕರ್ಯಗಳನ್ನು ಒದಗಿಸಿ ಇಲಾಖೆ ಹಾಗೂ ಸರ್ಕಾರದಿಂದ ದೊರಕುವ ಎಲ್ಲಾ ಸೌಲಭ್ಯಗಳನ್ನು ತಲುಪಿಸುವುದರ ಮೂಲಕ ಬೆನ್ನೆಲುಬಾಗಿ ನಿಂತಿದೆ.
ಜಿಲ್ಲೆಯ ಪ್ರತಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ವಿಕಲ ಚೇತನ ಮಕ್ಕಳನ್ನು ಗುರುತಿಸಿ ಪೋಷಕರಲ್ಲಿ ಅರಿವು ಮೂಡಿಸಿ ಮಾಹಿತಿ ನೀಡಿ ಮಕ್ಕಳ ದಾಖಲಾತಿ ಹೆಚ್ಚಿಸಲು ಕ್ರಮ ವಹಿಸಲಾಗಿದೆ ಎಂದ ಅವರು ಮಕ್ಕಳ ರಕ್ಷಣೆ ಮತ್ತು ಉತ್ತಮ ಭವಿಷ್ಯಕ್ಕಾಗಿ ಇಲಾಖೆ ಸದಾ ಸಿದ್ದವಾಗಿದೆ ಎಂದರು.
ಆಶಾಕಿರಣ ಅಂಧ ಮಕ್ಕಳ ವಸತಿಯುತ ಪಾಠ ಶಾಲೆ ಅಧ್ಯಕ್ಷರಾದ ಜೆ.ಪಿ ಕೃಷ್ಣೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ. ಶಾಲೆಯು ಪ್ರಾರಂಭವಾಗಿ 35 ವರ್ಷ ಪೂರ್ಣಗೊಂಡಿರುವುದು ಆಶ್ಚರ್ಯವೆ ಸರಿ, ಸಂಸ್ಥೆಯ ಏಳಿಗೆಗಾಗಿ ಅನೇಕರು ಕೊಡುಗೈದಾನಿಗಳಾಗಿ ಶ್ರಮಿಸಿದ್ದಾರೆ ಹಾಗೂ ಆಡಳಿತ ಮಂಡಳಿ ಧಕ್ಷತೆಯ ಕಾರ್ಯವು ಈ ಸಾಧನೆಗೆ ಸಹಕಾರಿಯಾಗಿದೆ ಎಂದ ಅವರು ನೇತ್ರ ದಾನವು ಉಳಿದೆಲ್ಲ ದಾನಗಳಿಗಿಂತ ಶ್ರೇಷ್ಠವಾದುದು. ಅಂಧ ಮಕ್ಕಳಿಗೆ ಪ್ರಪಂಚದ ಜ್ಞಾನ ಉಣಬಡಿಸಿ ಅವರ ಭವಿಷ್ಯ ರೂಪಿಸಿಕೊಡುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಆಶಾಕಿರಣ ಅಂಧ ಮಕ್ಕಳ ವಸತಿಯುತ ಪಾಠ ಶಾಲೆ ಕಾರ್ಯದರ್ಶಿ ಹೆಚ್.ಸಿ ಮಹೇಶ್ ಪ್ರಾಸ್ಥಾವಿಕವಾಗಿ ಮಾತನಾಡಿ ತಂದೆ, ತಾಯಿ ಹಾಗೂ ಗುರು ಹಿರಿಯರನ್ನು ಪ್ರತಿಯೊಬ್ಬರು ಗೌರವಿಸಬೇಕು. ಶಾಲೆಯು 1990 ರಲ್ಲಿ ಕೇವಲ ಬೆರಳೆಣಿಕೆ ವಿದ್ಯಾರ್ಥಿಗಳಿಂದ ಪ್ರಾರಂಭವಾದ ಸಂಸ್ಥೆಯು ಇಂದು ಅನೇಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿಕೊಟ್ಟಿದೆ.
ಮಕ್ಕಳು ಉತ್ತಮ ಫಲಿತಾಂಶಗಳೊಂದಿಗೆ ಉತ್ತೀರ್ಣರಾಗಿ ತೇರ್ಗಡೆಯಾಗಿದ್ದಾರೆ ಜೊತೆಗೆ ಸಂಗೀತ ಹಾಗೂ ಕ್ರೀಡೆಯಲ್ಲೂ ಉತ್ತಮ ಸಾಧನೆ ಮಾಡಿದ ಮಕ್ಕಳು ಸಂಸ್ಥೆಯಲ್ಲಿದ್ದಾರೆ ಎಂದ ಅವರು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ ಎಂದರು.
ಕಾರ್ಯಕ್ರಮದಲ್ಲಿ ನಗರ ಸಭೆ ಮಾಜಿ ಅಧ್ಯಕ್ಷೇ ಉಮಾ ದೇವಿ ಕೃಷ್ಣಪ್ಪ, ಆಶಾಕಿರಣ ಚಾರಿಟಬಲ್ ಟ್ರಸ್ಟ್ ಟ್ರಸ್ಟಿ ಡಾ. ವರ್ಷ ಅಭಿಷೇಕ್, ಡಾ. ಜ್ಯೋತಿಕೃಷ್ಣ, ಉಪಾಧ್ಯಕ್ಷ ನಸ್ರುಲ್ಲಾ ಶರೀಫ್, ಹೆಚ್.ಸಿ ಶಶಿ ಪ್ರಸಾದ್, ವಾಣಿ ನಾಯ್ಡು, ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ಕುಮಾರ್, ಉಪ ಪ್ರಾಂಶಯಪಾಲರಾದ ಎನ್.ಎಸ್ ಶ್ವೇತರಾಣಿ, ಅಂತರಾಷ್ಟ್ರೀಯ ಕ್ರೀಡಾಪಟು ಎಂ.ಎಸ್ ಶರತ್, ವೀರ ಭದ್ರಯ್ಯ, ಹೆಚ್.ಎಸ್ ಲಕ್ಷ್ಮೇ ಗೌಡ ಉಪಸ್ಥಿತರಿದ್ದರು.



