ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯನ್ನು ಭಾರತ 4-1ರಿಂದ ವಶಪಡಿಸಿಕೊಂಡಿದೆ. ಈಗಾಗಲೇ ಸರಣಿ ವಶಪಡಿಸಿಕೊಂಡಿದ್ದ ಟೀಂ ಇಂಡಿಯಾ ಭಾನುವಾರ ನಡೆದ ಐದನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಏಕಪಕ್ಷೀಯವಾಗಿ ಬರೋಬ್ಬರಿ 150 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿತ್ತು. ಮುಂಬೈನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ, ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರ 135 ರನ್‌ಗಳ ಸ್ಪೋಟಕ ಇನ್ನಿಂಗ್ಸ್ನಿಂದ 247 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ, ಗುರಿ ಬೆನ್ನಟ್ಟಿದ ಆಂಗ್ಲ ತಂಡ ಕೇವಲ 97 ರನ್‌ಗಳಿಗೆ ಆಲೌಟ್ ಆಯಿತು. ಮೊದಲು ಬ್ಯಾಟಿಂಗ್ನಲ್ಲಿ ಸ್ಫೋಟಕ ಶತಕ ಸಿಡಿಸಿದ್ದ ಅಭಿಷೇಕ್ ಆ ಬಳಿಕ ಬೌಲಿಂಗ್ನಲ್ಲೂ 2 ವಿಕೆಟ್ ಪಡೆಯುವ ಮೂಲಕ ಸಂಚಲನ ಮೂಡಿಸಿದರು.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಕ್ಕೆ ಸಾಧಾರಣ ಆರಂಭ ಸಿಕ್ಕಿತು. ಆರಂಭಿಕ ಸಂಜು ಸ್ಯಾಮ್ಸನ್ 16 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಇದರ ನಂತರ ಇನ್ನಿಂಗ್ಸ್ ಜವಬ್ದಾರಿ ಹೊತ್ತ ಅಭಿಷೇಕ್ ಶರ್ಮಾ ಮತ್ತು ತಿಲಕ್ ವರ್ಮಾ ಎರಡನೇ ವಿಕೆಟ್‌ಗೆ 43 ಎಸೆತಗಳಲ್ಲಿ 115 ರನ್‌ಗಳ ಜೊತೆಯಾಟ ನಡೆಸಿದರು. ಈ ವೇಳೆ ತಿಲಕ್ ವರ್ಮಾ 24 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
135 ರನ್ ಸಿಡಿಸಿದ ಅಭಿಷೇಕ್
ಆದಾಗ್ಯೂ ಒನ್ ಮ್ಯಾನ್ ಶೋ ಪ್ರದರ್ಶನ ಮುಂದುವರೆಸಿದ ಅಭಿಷೇಕ್ ಶರ್ಮಾ 54 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ 13 ಸಿಕ್ಸರ್‌ಗಳ ಸಹಾಯದಿಂದ 135 ರನ್ ಗಳಿಸಿ ಔಟಾದರು. ಉಳಿದಂತೆ ಸೂರ್ಯಕುಮಾರ್ ಯಾದವ್ 2 ರನ್, ಶಿವಂ ದುಬೆ 30 ರನ್, ಹಾರ್ದಿಕ್ ಪಾಂಡ್ಯ 9 ರನ್, ರಿಂಕು ಸಿಂಗ್ 9 ರನ್, ಅಕ್ಷರ್ ಪಟೇಲ್ 15 ರನ್‌ಗಳ ಕಾಣಿಕೆ ನೀಡಿದರು. ಇತ್ತ ಇಂಗ್ಲೆಂಡ್ ಪರ ಬ್ರೇಡನ್ ಕಾರ್ಸೆ ಮೂರು ಹಾಗೂ ಮಾರ್ಕ್ ವುಡ್ ಎರಡು ವಿಕೆಟ್ ಪಡೆದರೆ, ಆರ್ಚರ್, ಓವರ್ಟನ್ ಮತ್ತು ಆದಿಲ್ ರಶೀದ್ ತಲಾ ಒಂದೊಂದು ವಿಕೆಟ್ ಪಡೆದರು.
ಈ ಬೃಹತ್ ಮೊತ್ತ ಬೆನ್ನಟ್ಟಿದ ಇಂಗ್ಲೆಂಡ್ಗೆ ಒಂದೇ ಒಂದು ಒಳ್ಳೇಯ ಜೊತೆಯಾಟ ಸಿಗಲಿಲ್ಲ. ಆರಂಭದಿಂದಲೂ ತಂಡ ನಿಯಮಿತ ಅಂತರದಲ್ಲಿ ವಿಕೆಟ್ ಕಳೆದುಕೊಳ್ಳುತ್ತ ಸಾಗಿತು. ಹೀಗಾಗಿ ತಂಡಕ್ಕೆ ಮೂರಂಕಿಯ ಗಡಿ ದಾಟಲು ಸಾಧ್ಯವಾಗಲಿಲ್ಲ. ಆಂಗ್ಲರ ಪರ ಆರಂಭಿಕ ಪಿಲ್ ಸಾಲ್ಟ್ 55 ರನ್ ಬಾರಿಸಿದನ್ನು ಬಿಟ್ಟರೆ, ಜೆಕಬ್ ಬೆಥೆಲ್ 10 ರನ್‌ಗಳ ಕಾಣಿಕೆ ನೀಡಿದರು. ಉಳಿದ ಅಷ್ಟೂ ಬ್ಯಾಟರ್ಗಳಿಗೆ ಒಂದಂಕಿ ಮೊತ್ತ ದಾಟಲು ಸಾಧ್ಯವಾಗಲಿಲ್ಲ. ಇತ್ತ ಐದನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 150 ರನ್‌ಗಳ ಅಂತರದಿಂದ ಸೋಲಿಸುವ ಮೂಲಕ ಭಾರತ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರನ್ ಗಳ ಅಂತರದಲ್ಲಿ ಎರಡನೇ ಅತಿ ದೊಡ್ಡ ಗೆಲುವಿನ ದಾಖಲೆಯನ್ನು ಸೃಷ್ಟಿಸುವುದರೊಂದಿಗೆ ಸರಣಿಗೆ ಅಂತ್ಯ ಹಾಡಿದೆ.
ಈ ಪಂದ್ಯದಲ್ಲಿ 135 ರನ್‌ಗಳ ಇನ್ನಿಂಗ್ಸ್ ಆಡಿದ ಅಭಿಷೇಕ್ ಟಿ20 ಪಂದ್ಯದಲ್ಲಿ ಭಾರತದ ಪರ ಅತ್ಯಧಿಕ ವೈಯಕ್ತಿಕ ಸ್ಕೋರ್ ಬಾರಿಸಿದ ದಾಖಲೆಯನ್ನು ಸೃಷ್ಟಿಸಿದರು. ಅವರು ಶುಭ್ಮನ್ ಗಿಲ್ ಅವರ ದಾಖಲೆಯನ್ನು ಮುರಿದರು. 2023 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಶುಭಮನ್ 126 ರನ್ ಸಿಡಿಸಿದ್ದರು. ಆದರೆ ಅಭಿಷೇಕ್ 135 ರನ್ ಗಳಿಸುವ ಮೂಲಕ ಗಿಲ್ ದಾಖಲೆಯನ್ನು ಮುರಿದರು.



