ಕಾಡುಕೋಣ ದಾಳಿಗೆ ರೈತರೊಬ್ಬರು ಬಲಿಯಾದ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲ್ಲೂಕಿನಲ್ಲಿ ನಡೆದಿದೆ.
ಕಳಸ ತಾಲ್ಲೂಕು ಹಳುವಳ್ಳಿ ಸಮೀಪದ ಲಿಲಿತಾದ್ರಿ ಎಂಬಲ್ಲಿ ಹಿರಿಯ ಕೃಷಿಕ ರಘುಪತಿ ಹೆಬ್ಬಾರ್ (73) ಕಾಡುಕೋಣ ದಾಳಿಯಿಂದ ಸಾವನ್ನಪ್ಪಿರುವವರು.
ಇಂದು ಬೆಳಿಗ್ಗೆ 11 ಗಂಟೆಗೆ ತೋಟಕ್ಕೆ ಹೋದವರು ಮಧ್ಯಾಹ್ನದವರೆಗೂ ಮನೆಗೆ ಮರಳಲಿಲ್ಲ. ಅವರಿಗೆ ಫೋನ್ ಕರೆ ಮಾಡಿದರೂ ಉತ್ತರ ಕೊಡಲಿಲ್ಲ.ಅವರನ್ನು ಹುಡುಕಿಕೊಂಡು ಮಗ ಬಂದಾಗ ತೋಟದಲ್ಲಿ ಸಾವಿಗೀಡಾಗಿರುವುದು ಕಂಡು ಬಂತು.
ಸ್ಥಳಕ್ಕೆ ಅರಣ್ಯ ಮತ್ತು ಪೊಲೀಸ್ ಇಲಾಖೆಯ ಕಳಸದ ಸಿಬ್ಬಂದಿ ಭೇಟಿ ನೀಡಿದ್ದಾರೆ. ಕಾಡುಕೋಣಗಳ ಹಾವಳಿ ಬಗ್ಗೆ ಗ್ರಾಮಸ್ಥರು ಆಕ್ರೋಶ ಹೊರಹಾಕಿದರು. ಕೋಣಗಳನ್ನು ಕಾಡಿಗೆ ಅಟ್ಟುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕಳಸ ಮೂಡಿಗೆರೆ ಭಾಗದಲ್ಲಿ ಕಾಡುಕೋಣಗಳ ಹಾವಳಿ ವಿಪರೀತವಾಗಿದ್ದು, ರೈತರಿಗೆ ಮಾರಕವಾಗಿ ಪರಿಣಮಿಸಿವೆ.
ಇತ್ತೀಚೆಗೆ ಮೂಡಿಗೆರೆ ಸಮೀಪದ ಹಳೇಕೋಟೆ ಗ್ರಾಮದಲ್ಲಿ ಕಾಫಿ ಕೊಯ್ಲು ಮಾಡುತ್ತಿದ್ದ ಕಾರ್ಮಿಕ ಮಹಿಳೆಯ ಮೇಲೆ ಕಾಡುಕೋಣವೊಂದು ದಾಳಿ ಮಾಡಿ ಸಾಯಿಸಿತ್ತು. ಆ ಘಟನೆ ಮಾಸುವ ಮುನ್ನವೇ ಮಲೆನಾಡಿನಲ್ಲಿ ಮತ್ತೊಂದು ಜೀವ ಕಾಡುಕೋಣಗಳ ದಾಳಿಗೆ ಬಲಿಯಾಗಿದೆ.



