ಕಾಡು ಪ್ರಾಣಿಗಳ ಹಾವಳಿಯನ್ನು ತಪ್ಪಿಸಿ ಶಾಶ್ವತ ಪರಿಹಾರ ನೀಡುವಂತೆ ಒತ್ತಾಯಿಸಿ ಸರ್ಕಾರದ ಮೇಲೆ ಒತ್ತಡ ಹಾಕಲು ಸರ್ವಪಕ್ಷ , ಸಂಘಟನೆಗಳು ಹಾಗೂ ರೈತರಿಂದ ಇಂದು(7-02-2025)ಕಳಸ ಬಂದ್‍ಗೆ ಕರೆ ನೀಡಲಾಗಿದೆ.
ಗುರುವಾರ ಕಳಸ ತಾಲ್ಲೂಕಿನ ಹಳುವಳ್ಳಿ ಸಮೀಪ ಕೃಷಿಕ ರಘುಪತಿ ಹೆಬ್ಬಾರ್ ಮೇಲೆ ಕಾಡು ಕೋಣ ದಾಳಿ ಮಾಡಿ ಮೃತರಾದ ಬೆನ್ನಲ್ಲೇ ಕಳಸ ಬಂದ್ ಗೆ ಕರೆ ನೀಡಲಾಗಿದೆ.
ಈ ಹಿಂದೆಯೂ ಕಾಡು ಕೋಣಗಳು ದಾಳಿ ಮಾಡಿ ಹಲವಾರು ಪ್ರಾಣ ಹಾನಿಗಳು ಸಂಭವಿಸಿದೆ. ತಾಲ್ಲೂಕಿನಲ್ಲಿ ಕಾಡುಕೋಣಗಳ ಹಾವಳಿ ವಿಪರೀತವಾಗಿದ್ದು, ಜಮೀನಿಗೆ ತೆರಳಲು ಮಾಲೀಕರು, ಕಾರ್ಮಿಕರು ಭಯಪಡುವಂತಾಗಿದೆ. ಇದಕ್ಕೆ ಶಾಸ್ವತ ಪರಿಹಾರವನ್ನು ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿ ಬಂದ್‍ಗೆ ಕರೆ ನೀಡಲಾಗಿದೆ.
ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಶ್ರೀ ಕಲಶೇಶ್ವರ ದೇವಸ್ಥಾನದ ಬಳಿಯಿಂದ ಕಳಸ ಮುಖ್ಯರಸ್ತೆಯಲ್ಲಿ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನೆ ಮೆರವಣಿಗೆಯನ್ನು ನಡೆಸಿ ನಂತರ ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಿ, ವಲಯ ಅರಣ್ಯ ಕಚೇರಿಗೆ ತೆರಳಿ, ಅರಣ್ಯ ಅಧಿಕಾರಿಗಳಿಗೆ ಕಾಡುಕೋಣ ಸ್ಥಳಾಂತರಕ್ಕೆ ತುರ್ತು ಕ್ರಮ ಕೈಗೊಳ್ಳಲು ಆಗ್ರಹಿಸಿ ಕಳಸ ಪಟ್ಟಣ ಬಂದ್ ಮಾಡಲು ಸರ್ವಪಕ್ಷಗಳ ಮುಖಂಡರು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಒಮ್ಮತದಿಂದ ತೀರ್ಮಾನಿಸಿದ್ದಾರೆ.



