ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಕಾಫಿ ತೋಟವೊಂದು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನಲ್ಲಿ ಈ ಘಟನೆ ನಡೆದಿದೆ.
ಬೇಲೂರು ತಾಲ್ಲೂಕಿನ ಮಾದಿಹಳ್ಳಿ ಹೋಬಳಿಯ ಹಾಲ್ತೋರೆ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.
ಹಾಲ್ತೋರೆ ಗ್ರಾಮದ ಕೃಷಿಕ ಶಂಕರೇಗೌಡ ಎಂಬುವವರ ಕಾಫಿ ತೋಟಕ್ಕೆ ಬೆಂಕಿ ಬಿದ್ದು ಸುಮಾರು 3 ಎಕರೆ ತೋಟ ಸಂಪೂರ್ಣ ಭಸ್ಮವಾಗಿದೆ.
ಶಂಕರೆಗೌಡ ಅವರು ತಮ್ಮ ತೋಟದಲ್ಲಿ ಮಿಶ್ರಬೆಳೆ ಬೆಳೆದಿದ್ದರು. ಕಾಫಿ, ಅಡಿಕೆ, ಕಾಳುಮೆಣಸು ಮತ್ತು ಸಿಲ್ವರ್ ಮರಗಳನ್ನು ಬೆಳೆದಿದ್ದರು. ಬಹಳ ಕಷ್ಟಪಟ್ಟು ತೋಟವನ್ನು ಸಾಗುವಳಿ ಮಾಡಿದ್ದರು. ಕಾಫಿ ಗಿಡಗಳು ಚೆನ್ನಾಗಿ ಬೆಳೆದು ಫಸಲು ನೀಡುತ್ತಿದ್ದವು. ಅಡಿಕೆ ಗಿಡಗಳು ಫಸಲು ನೀಡುವ ಹಂತಕ್ಕೆ ಬಂದಿದ್ದವು.
ಗುರುವಾರ ಮಧ್ಯಾಹ್ನ ತೋಟದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರು ಎಷ್ಟೇ ಪ್ರಯತ್ನಪಟ್ಟರೂ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ಕಣ್ಣೇದುರೆ ಬೆಳೆದು ನಿಂತಿದ್ದ ಗಿಡಗಳು ಬೆಂಕಿಗೆ ಆಹುತಿ ಆಗುತ್ತಿರುವುದನ್ನು ಕಂಡು ಕೃಷಿಕ ಶಂಕರೇಗೌಡ ಅವರು ಕಣ್ಣೀರಿಡುತ್ತಿರುವ ದೃಶ್ಯ ಮನಕಲಕುವಂತಿತ್ತು. ಸ್ಥಳೀಯರು ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬಂದು ಅಕ್ಕಪಕ್ಕದ ಜಮೀನುಗಳಿಗೆ ಹರಡದಂತೆ ತಡೆದರು.
ಬೆಂಕಿ ಯಾವ ರೀತಿ ಹೊತ್ತಿಕೊಂಡಿತು ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ಯಾರೋ ಬೀಡಿ ಸಿಗರೇಟು ಸೇದಿ ಎಸೆದ ಗಿಡಿ ಕೆನ್ನಾಲಿಗೆಯಾಗಿ ತೋಟವನ್ನು ಆಹುತಿ ಪಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ.



