ಫೆಬ್ರುವರಿ 14ರಂದು ಪ್ರೇಮಿಗಳ ದಿನದಂದು ಯುವ ಜೋಡಿಯೊಂದು ವಿಶೇಷ ರೀತಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ಪಟ್ಟಣದಲ್ಲಿ ಯುವ ಪ್ರೇಮಿಗಳು ಅಂಬೇಡ್ಕರ್ ಪ್ರತಿಮೆ ಎದುರು ದಾಂಪತ್ಯ ಬದುಕಿಗೆ ಪಾದಾರ್ಪಣೆ ಮಾಡಿದ್ದಾರೆ.
ಕಡೂರು ತಾಲ್ಲೂಕಿನ ಯಗಟಿ ಗ್ರಾಮದ ಕುಮಾರ್ ಮತ್ತು ಹಾಸನ ಜಿಲ್ಲೆ ಅರಸಿಕೆರೆ ತಾಲ್ಲೂಕಿನ ಪುರ್ಲಹಳ್ಳಿಯ ಸುಚಿತ್ರಾ ಪ್ರೇಮಿಗಳ ದಿನದಂದು ಪ್ರೇಮವಿವಾಹವಾಗಿದ್ದಾರೆ.
ಕುಮಾರ್ ಅವರು ಮಾಧ್ಯಮದೊಂದಿಗೆ ಮಾತನಾಡಿ ನಾವು ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದೆವು, ನಾನು ಮಾದಿಗ ಜನಾಂಗಕ್ಕೆ ಸೇರಿದ್ದು, ಸುಚಿತ್ರಾ ಲಂಬಾಣಿ ಸಮುದಾಯದವರು. ನಮ್ಮಿಬ್ಬರ ವಿವಾಹಕ್ಕೆ ನಮ್ಮ ಮನೆಯಲ್ಲಿ ಒಪ್ಪಿಗೆ ಇತ್ತು. ಸುಚಿತ್ರಾ ಮನೆಯಲ್ಲಿ ಅವರ ತಾಯಿ ಹೊರತುಪಡಿಸಿ ಉಳಿದವರು ಒಪ್ಪಿಗೆ ಸೂಚಿಸಿರಲಿಲ್ಲ. ನಾನು ಅಂಬೇಡ್ಕರ್ ಅವರ ಅಭಿಮಾನಿಯಾಗಿದ್ದು, ಅವರ ಪ್ರತಿಮೆ ಎದುರೆ ವಿವಾಹವಾಗಬೇಕೆಂಬ ಬಯಕೆಯಿತ್ತು. ಅದು ಇಂದು ಈಡೇರಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಉಪಾಧ್ಯಕ್ಷ ಜಿಗಣೆಹಳ್ಳಿ ನೀಲಕಂಠಪ್ಪ, ತಾಲ್ಲೂಕು ಮಾದಿಗ ಸಮಾಜದ ಗೌರವಾಧ್ಯಕ್ಷ ಕೆ.ವೈ.ವಾಸು, ಅಧ್ಯಕ್ಷ ಜಗದೀಶ್, ಪ್ರಧಾನ ಕಾರ್ಯದರ್ಶಿ ಗಂಗರಾಜು, ಸಗನಪ್ಪ, ನಾರಾಯಣಸ್ವಾಮಿ, ತಿಮ್ಮಯ್ಯ ಯುವ ಪ್ರೇಮಿಗಳ ಸರಳ ಮತ್ತು ವಿಶಿಷ್ಟ ರೀತಿಯ ವಿವಾಹಕ್ಕೆ ಸಾಕ್ಷಿಯಾದರು.



