ಆಕಸ್ಮಿಕವಾಗಿ ಮನೆಗೆ ಬೆಂಕಿತಗುಲಿದ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಗೃಹಿಣಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಬಾಳೂರು ಹೋಬಳಿ ಮಾಳಿಗನಾಡು ಗ್ರಾಮದಲ್ಲಿ ಕೃಷಿಕ ಸುನಿಲ್ ಎಂಬುವವರ ಮನೆ ಆಕಸ್ಮಿಕ ಬೆಂಕಿ ಅವಘಡದಿಂದ ಸಂಪೂರ್ಣ ಸುಟ್ಟು ಹೋಗಿತ್ತು. ಈ ಸಂದರ್ಭದಲ್ಲಿ ಮೈಗೆ ಬೆಂಕಿ ತಗುಲಿ ತೀವ್ರವಾಗಿ ಗಾಯಗೊಂಡಿದ್ದ ಗೃಹಿಣಿ ಚಿಕಿತ್ಸೆ ಫಲಕಾರಿಯಾಗದೇ ದುರ್ಮರಣ ಹೊಂದಿದ್ದಾರೆ.
ಅಗ್ನಿ ಅವಘಡದಲ್ಲಿ ಮನೆಯಲ್ಲಿ ಇದ್ದ ಗೃಹಿಣಿ ರೇಖಾ (36) ತೀವ್ರವಾಗಿ ಗಾಯಗೊಂಡು, ಅವರ ಸ್ಥಿತಿ ಗಂಭೀರವಾಗಿತ್ತು. ಅವರನ್ನು ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಶನಿವಾರ ಕೊನೆಯುಸಿರೆಳೆದಿದ್ದಾರೆ.
ಅಡಿಗೆಗೆ ಸ್ಟವ್ ಹಚ್ಚುವ ವೇಳೆ ಅಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಅವರ ಮನೆ ಸಂಪೂರ್ಣ ಸುಟ್ಟುಹೋಗಿತ್ತು. ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಪ್ರಯತ್ನಿಸಿದರಾದರೂ ಅಷ್ಟೊತ್ತಿಗೆ ಮನೆಯ ಪರಿಕರಗಳು ಬಹುತೇಕ ಬೆಂಕಿಗೆ ಆಹುತಿಯಾಗಿದ್ದವು, ಮನೆಯಲ್ಲಿದ್ದ ಕಾಫಿ ಮೂಟೆಗಳು ಸಹ ಬೆಂಕಿಯಿಂದ ಸುಟ್ಟುಹೋಗಿದ್ದವು.
ಘಟನೆಯಲ್ಲಿ ಮನೆಯ ವಸ್ತುಗಳನ್ನು ರಕ್ಷಿಸಲು ಹರಸಾಹಸಪಟ್ಟಿದ್ದ ಗೃಹಿಣಿ ರೇಖಾ ಮೈಗೆ ಬೆಂಕಿ ತಗುಲಿ ತೀವ್ರವಾಗಿ ಗಾಯಗೊಂಡಿದ್ದರು.
ಮಾಳಿಗನಾಡು ಗ್ರಾಮದ ಸುನೀಲ್ ಎಂಬುವವರ ಮನೆಯಲ್ಲಿ ಈ ಅವಘಡ ಸಂಭವಿಸಿತ್ತು, ಸುನಿಲ್ ಅವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ತನ್ನ ಪ್ರಾಣವನ್ನೇ ಕಳೆದುಕೊಂಡ ರೇಖಾ ನಿಧನದಿಂದ ಅವರ ಕುಟುಂಬ ಕಂಗಾಲಾಗಿದೆ. ಇತ್ತ ಮನೆಯೂ ಸುಟ್ಟುಹೋಗಿದ್ದು, ಮನೆಯ ಆಧಾರಸ್ತಂಭವಾಗಿದ್ದ ಗೃಹಿಣಿಯ ಸಾವಿನಿಂದ ಅವರ ಪತಿ ಸುನಿಲ್ ಹಾಗೂ ಹೆಣ್ಣುಮಕ್ಕಳು ದಿಕ್ಕುತೋಚದಂತಾಗಿದ್ದಾರೆ.



