ಅಬಕಾರಿ ಇಲಾಖೆಯ ಅಧಿಕಾರಿಗಳ ತ್ವರಿತ ಕಾರ್ಯಾಚರಣೆಯಿಂದ ಮೂಡಿಗೆರೆ ಪಟ್ಟಣದ ಬೇಲೂರು ರಸ್ತೆಯ ಬೀಜುವಳ್ಳಿ ಗ್ರಾಮದ ಹಳಸೆ ತಿರುವಿನಲ್ಲಿ ಗಾಂಜಾ ಅಕ್ರಮ ಸಾಗಾಟ ನಡೆಸುತ್ತಿದ್ದವನನ್ನು ಬಂಧಿಸಲಾಗಿದೆ.
ಅಬಕಾರಿ ಉಪ ಆಯುಕ್ತರು, ಚಿಕ್ಕಮಗಳೂರು ಜಿಲ್ಲೆ, ಇವರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಅಧೀಕ್ಷಕರು, ಮೂಡಿಗೆರೆ ಅವರ ನೇತೃತ್ವದಲ್ಲಿ ಈ ದಾಳಿ ನಡೆಸಲಾಯಿತು.
ವಜೀರ್ ಅಹ್ಮದ್ ಅಲಿಯಾಸ್ ಶೇಕ್ ಅಬ್ದುಲ್ಲ ಬಿನ್ ಲೇಟ್ ಅಲಿಜಾನ್ (27), ಜೆಎಂ ರಸ್ತೆ, ಮೂಡಿಗೆರೆ ಎಂಬುವವನು ತನ್ನ ವ್ಯಾಗನಾರ್ ಕಾರು (ನಂ. ಕೆಎ 19 ಎನ್ 5049) ನಲ್ಲಿ 1.975 ಕೆ.ಜಿ. ಗಾಂಜಾ ಸಾಗಾಟ ಮಾಡುತ್ತಿದ್ದಾನೆ ಎಂಬ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿಯನ್ನು ಎನ್‌ಡಿಪಿಎಸ್ (NDPS) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ಚಿಕ್ಕಮಗಳೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಶ್ರೀಮತಿ ರೂಪ ಎಂ, ಅಬಕಾರಿ ಉಪ ಆಯುಕ್ತರು ಚಿಕ್ಕಮಗಳೂರು ಇವರ ಮಾರ್ಗದರ್ಶನದಲ್ಲಿ ಸಂತೋಷ್ ಕುಮಾರ್ ಕೆ.ಜಿ. ಅಬಕಾರಿ ಅಧೀಕ್ಷಕರು ಇವರ ನಿರ್ದೇಶನದ ಮೇರೆಗೆ ಕಾರ್ಯಾಚರಣೆಯಲ್ಲಿ ಮೂಡಿಗೆರೆ ಅಬಕಾರಿ ಉಪ ಅಧೀಕ್ಷಕರಾದ ಶೇಖರ್ ಎಂ.ಆರ್ ಇವರ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕರಾದ ಲೋಕೇಶ್ ಸಿ., ಸಿಬ್ಬಂದಿಗಳಾದ ರಮೇಶ್ ತುಳಜಣ್ಣನವರ್, ಶಂಕರ ಗುರವ ಹಾಗೂ ವಾಹನ ಚಾಲಕರಾದ ಪ್ರವೀಣ್ ಅವರು ಭಾಗವಹಿಸಿದ್ದರು.
ಪ್ರಕರಣವನ್ನು ಅಬಕಾರಿ ನಿರೀಕ್ಷಕರಾದ ಲೋಕೇಶ್ ಸಿ., ಮೂಡಿಗೆರೆ ಉಪ ವಿಭಾಗ ಇವರು ದಾಖಲಿಸಿ ತನಿಖೆಯನ್ನು ಮುಂದುವರಿಸಿದ್ದಾರೆ.


