ಮೂಡಿಗೆರೆ ತಾಲ್ಲೂಕು ಬಣಕಲ್ ಹೋಬಳಿ ಹೆಗ್ಗುಡ್ಲು ಅಂಚೆ ಇಲಾಖೆಯ ಶಾಖೆಯಲ್ಲಿ ನಲವತ್ತೊಂದು ವರ್ಷಗಳು ಅಂಚೆ ಪಾಲಕರಾಗಿ ಸುದೀರ್ಘ ಪಯಣ ನಡೆಸಿ ಸಾರ್ಥಕ ಮತ್ತು ಸುದೀರ್ಘ ಸೇವೆಯೊಂದಿಗೆ ನಾಗೇಶ್ ಗೌಡರು ನಿವೃತ್ತಿ ಗೊಂಡಿರುವುದರಿಂದ ಶುಕ್ರವಾರ ಬಣಕಲ್ ಅಂಚೆ ಕಚೇರಿ ಸಿಬ್ಬಂದಿ ವರ್ಗದವರಿಂದ ಬೀಳ್ಕೊಡುಗೆ ಕಾರ್ಯಕ್ರಮ ನಡೆಸಿದರು.
ಇವರು ಗ್ರಾಮೀಣ ಪ್ರದೇಶದ ಜನಸಾಮಾನ್ಯರ ಅಗತ್ಯದ ಸೇವೆಯಾಗಿ ತಮ್ಮ ಜವಾಬ್ದಾರಿ ನಿರ್ವಹಿಸುವಲ್ಲಿ ಸಫಲರಾಗಿದ್ದರು. ಅಂಚೆ ಇಲಾಖೆಯಲ್ಲಿನ ಪ್ರಾಮಾಣಿಕತೆಯ ಜೊತೆಗೆ ಶಿಸ್ತುಬದ್ಧತೆಯ ಕಚೇರಿ ನಿರ್ವಹಣೆ ಮತ್ತು ಸಾರ್ವಜನಿಕರಿಗೆ ಕಾಲಕಾಲಕ್ಕೆ ಮಾಹಿತಿ ಸಲಹೆಗಳನ್ನು ನೀಡುತ್ತಾ ಹೆಗ್ಗುಡ್ಲು, ಮತ್ತಿಕಟ್ಟೆ ಜನರ ಪ್ರೀತಿಗೆ ಪಾತ್ರರಾಗಿದ್ದರು.
ಈ ಸಂದರ್ಭದಲ್ಲಿ ಬಣಕಲ್ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಮಹೇಂದ್ರ ಮೌರ್ಯ ಮಾತನಾಡಿ ತಮ್ಮ ಸುದೀರ್ಘ 41ವರ್ಷಗಳ ಸೇವೆಯಲ್ಲಿ ಯಾವುದೇ ಚ್ಯುತಿ ಬಾರದ ಹಾಗೆ ತಮ್ಮ ಸೇವೆಯನ್ನು ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು ಮತ್ತು ತಮ್ಮ ನಿವೃತ್ತಿ ಜೀವನ ಸುಖ ಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅಂಚೆ ಕಚೇರಿಯ ಸಿಬ್ಬಂದಿಗಳಾದ ಮಂಜುನಾಥ್ ಹೆಗ್ಗುಡ್ಲು, ರವಿಕುಮಾರ್, ಮಂಜುನಾಥ್ ಹೊಸಹಳ್ಳಿ, ನಿಶಾಂತ್ ಬಣಕಲ್, ದೇವರಾಜ್, ಗೀತಾ ಕೆಂಜಿಗೆ, ಪಾವನ ಬಿ.ಹೊಸಹಳ್ಳಿ ಉಪಸ್ಥಿತರಿದ್ದರು.


