ಅಂಧಮಕ್ಕಳ ಭಾವನೆಗಳಿಂದ ಬಿಡುಗಡೆಯಾಗುವ ವಿಚಾರಗಳು ಪರಿಶುದ್ಧತೆಯಿಂದ ಕೂಡಿರುತ್ತವೆ ಎಂದು ಆದಿಚುಂಚನಗಿರಿ ಶೃಂಗೇರಿ ಶಾಖಾಮಠದ ಶ್ರೀಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.
ಅವರು ಇಂದು ಆಶಾಕಿರಣ ಶಾಲಾವರಣದಲ್ಲಿ ಆಶಾಕಿರಣ ಅಂಧಮಕ್ಕಳ ವಸತಿಯುತ ಪಾಠಶಾಲೆ, ಆಶ್ರಯ ಫೌಂಡೇಷನ್, ಜಿಲ್ಲಾ ಕಸಾಪ, ಜಿಲ್ಲಾ ಜಾನಪದ ಪರಿಷತ್ ಇವರುಗಳ ಸಹಯೋಗದಲ್ಲಿ ಆಶಾಕಿರಣ ಚಾರಿಟಬಲ್ ಟ್ರಸ್ಟ್ ವತಿಯಿಂದ ನಿರ್ಮಾಣವಾಗಿರುವ ಕಾವೇರಿ ವಸತಿ ಗೃಹದ ಉದ್ಘಾಟನೆಯನ್ನು ನೆರವೇರಿಸಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಅಂತಃಕರಣದಲ್ಲಿ ವಿಶೇಷ ಜ್ಞಾನ ಪಡೆದುಕೊಂಡು ಮಾತನಾಡುವವರು ಅಂಧಮಕ್ಕಳು, ವರನಟ ಡಾ. ರಾಜ್‌ಕುಮಾರ್‌ರವರು ಅಭಿಮಾನಿಗಳನ್ನು ದೇವರೆಂದು ಕರೆದರೆ, ಡಾ. ಜೆ.ಪಿ ಕೃಷ್ಣೇಗೌಡ ಅವರು ಅಂಧಮಕ್ಕಳನ್ನು ದೇವರೆಂದು ಕರೆದಿದ್ದಾರೆ. ದೇವರ ಸ್ವರೂಪವಾಗಿರುವ ಅಂಧಮಕ್ಕಳ ಶಾಲೆಯ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನಗೆ ಬಯಸದೇ ಬಂದ ಭಾಗ್ಯ ಎಂದು ಹೇಳಿದರು.
ಅಂಧ ಅಂದ ತಕ್ಷಣ ಎಲ್ಲರೂ ದೂರ ಸರಿಯುತ್ತಾರೆ, ಕಣ್ಣು ಕಾಣಲ್ಲ, ಕಿವಿ ಕೇಳಿಸಲ್ಲ, ಮಾತು ಬರುವುದಿಲ್ಲ ಎಂಬ ಕಾರಣಕ್ಕೆ ಸಮಾಜ ಮತ್ತು ಕುಟುಂಬದವರು ಸಹ ದೂರವಾಗುತ್ತಾರೆ. ಗೋವಿನ ಹತ್ತಿರ ಜೀವಿಸಿದರೆ ಆಯಸ್ಸು ಹೆಚ್ಚಾಗುತ್ತದೆ, ಪರಿಸರದ ಮಧ್ಯೆ ಇದ್ದರೆ ಮನುಷ್ಯನ ಆಯಸ್ಸು ಹೆಚ್ಚಾಗುತ್ತದೆ ಎಂದು ವಿಶ್ಲೇಷಿಸಿದರು.
ಕಳೆದ 30 ವರ್ಷಗಳಿಂದ ಒಟ್ಟಿಗೆ ಇದ್ದು, ಡಾ. ಜೆ.ಪಿ ಕೃಷ್ಣೇಗೌಡರು ಅಂಧಮಕ್ಕಳ ಸೇವೆ ಮಾಡುವ ಮೂಲಕ ಜನಾನುರಾಗಿಯಾಗಿದ್ದಾರೆ, ಅವರಿಗೆ ವಯಸ್ಸಾದಂತೆ ಕಾಣುತ್ತಿಲ್ಲ. ಕಾರಣ ಈ ಪರಿಸರದಲ್ಲಿ ದೇವರ ಸ್ವರೂಪಿಗಳೊಂದಿಗೆ ಜೀವಿಸುತ್ತಿರುವುದರಿಂದ ಆಯಸ್ಸು ಹೆಚ್ಚಾಗಿದೆ ಎಂದು ತಿಳಿಸಿದರು.
ಹಿಂದೆ ಬಾಲಗಂಗಾಧರನಾಥ ಸ್ವಾಮಿಗಳು ರಾಮನಗರದಲ್ಲಿ ದೇವರ ಗೋಪುರ ಕಟ್ಟುವ ಹಾಗೆ ಕಲ್ಲಿನ ಗೋಡೆಯಿಂದ ಅಂಧಮಕ್ಕಳ ಶಾಲೆಯ ಕಟ್ಟಡವನ್ನು ನಿರ್ಮಿಸಿದ್ದಾರೆ. ಒಬ್ಬ ವ್ಯಕ್ತಿ ಬಡವ-ಶ್ರೀಮಂತ, ಮೇಲು-ಕೀಳು ಎಂಬ ಕೀಳರಿಮೆ ಬಿಟ್ಟು ನಾವೆಲ್ಲಾ ಮನುಷ್ಯರು ಎಂಬ ಭಾವನೆಯಿಂದ ಬದುಕುವುದು ಅಗತ್ಯ ಎಂದು ಹೇಳಿದರು.
ತಂದೆ-ತಾಯಿಯಿಂದ ಪಡೆದ ಸಂಸ್ಕಾರವನ್ನು ಜನಪರ ಕಾರ್ಯಗಳಿಗೆ ಪ್ರಸ್ತುತ ಸಮಾಜದಲ್ಲಿ ಬಳಕೆ ಮಾಡುವವರು ಬಹಳ ವಿರಳ ಎಂದು ವಿಷಾಧಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಡಾ. ಜೆ.ಪಿ ಕೃಷ್ಣೇಗೌಡ ನೇತೃತ್ವ, ಸಹಯೋಗದ ಕಾರಣದಿಂದ ಸಾವಿರಾರು ದಿವ್ಯಾಂಗ ಮಕ್ಕಳಿಗೆ ಆಶ್ರಯ ನೀಡಿ ಆಶಾಕಿರಣ ಅಂಧಮಕ್ಕಳ ಶಾಲೆಯಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತ ವಸತಿ, ಶಿಕ್ಷಣ, ದಾಸೋಹ ನೀಡುತ್ತಿರುವ ಬಗ್ಗೆ ಶ್ಲಾಘಿಸಿದರು.
ಅಂಧಮಕ್ಕಳ ಪಾಠಶಾಲೆಯ ಅಧ್ಯಕ್ಷರಾದ ಡಾ. ಜೆ.ಪಿ ಕೃಷ್ಣೇಗೌಡ ಮಾತನಾಡಿ, ಇಲ್ಲಿ ಅಂಧಮಕ್ಕಳ ಪಾಠಶಾಲೆ ಸ್ಥಾಪಿಸಲು ಬಾಲಗಂಗಾಧರನಾಥ ಮಹಾಸ್ವಾಮಿಗಳು ಮಾರ್ಗದರ್ಶಕರಾಗಿ ಶಕ್ತಿ ತುಂಬಿದ್ದರು. 25ನೇ ವರ್ಷದ ಬೆಳ್ಳಿ ಮಹೋತ್ಸವಕ್ಕೆ ನಿರ್ಮಲಾನಂದನಾಥ ಮಹಾಸ್ವಾಮಿಗಳು ಆಗಮಿಸಿ ಸಂಸ್ಥೆಗೆ ಬಲ ತುಂಬಿದ್ದರು. ಗುಣನಾಥ ಶ್ರೀಗಳು ಈ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿರುವುದು ಸಮಾಜ ಸೇವೆಗೆ ಸಮರ್ಪಿಸಿಕೊಂಡಿರುವುದಕ್ಕೆ ಉದಾಹರಣೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ನಸ್ರುಲ್ಲಾ ಶರೀಫ್, ಮೋಹನ್, ಎಐಟಿ ಪ್ರಾಂಶುಪಾಲರಾದ ಡಾ. ಸಿ.ಟಿ ಜಯದೇವ, ಜ್ಯೋತಿ ಜೆ.ಪಿ ಕೃಷ್ಣೇಗೌಡ ಡಾ.ವರ್ಷ .ಮತ್ತಿತರರು ಉಪಸ್ಥಿತರಿದ್ದರು.ಅಂಧಮಕ್ಕಳ ಶಾಲೆಯ ಕಾರ್ಯದರ್ಶಿ ಹೆಚ್.ಸಿ ಮಹೇಶ್ ಸ್ವಾಗತಿಸಿ, ಮುಖ್ಯ ಶಿಕ್ಷಕ ಲಕ್ಷ್ಮಣ್‌ಗೌಡ ಕೊನೆಯಲ್ಲಿ ವಂದಿಸಿದರು.



