ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿಯ ಕಾನೂನು ಜಾರಿಗೆ ತರುತ್ತಿರುವುದನ್ನು ಖಂಡಿಸಿ ಸುಪ್ರೀಂ ಕೋರ್ಟಿನ ತೀರ್ಪಿನಂತೆ ಯಥಾಸ್ಥಿತಿ ಪಿಂಚಣಿ ಪರಿಷ್ಕರಿಸುವಂತೆ ಆಗ್ರಹಿಸಿ ಚಿಕ್ಕಮಗಳೂರು ನಗರದ ಆಜಾದ್ ವೃತ್ತದಲ್ಲಿ ಕೇಂದ್ರ ಸರ್ಕಾರಿ ಪಿಂಚಣಿದಾರರ ಒಕ್ಕೂಟ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯ ನೇತೃತ್ವವನ್ನು ಜಿಲ್ಲೆಯ ಕೇಂದ್ರ ಸರ್ಕಾರಿ ಪಿಂಚಣಿದಾರರ ಒಕ್ಕೂಟ, ಬಿಎಸ್‌ಎನ್‌ಎಲ್, ಕಾಫಿ ಮಂಡಳಿ, ಅಂಚೆ ಇಲಾಖೆ, ಅಬಕಾರಿ ಇಲಾಖೆ ಹಾಗೂ ಸಾಂಬಾರ ಮಂಡಳಿಯ ನಿವೃತ್ತ ನೌಕರರು ವಹಿಸಿ ಪ್ರತಿಭಟನೆ ನಡೆಸಿದರು.
ಕೇಂದ್ರಸರ್ಕಾರ ಮಾರ್ಚ್ 21 ರಂದು ಕಾರ್ಮಿಕ ವಿರೋಧಿ ಕಾನೂನನ್ನು ಲೋಕಸಭೆಯಲ್ಲಿ ಮಂಡಿಸಿದ ಹಣಕಾಸು ಮಸೂದೆಯಲ್ಲಿ ಇನ್ನು ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಕೇಂದ್ರಸರ್ಕಾರದ ನಿವೃತ್ತ ನೌಕರರಿಗೆ ಪಿಂಚಣಿ ಪರಿಷ್ಕರಣೆ ಇರುವುದಿಲ್ಲ ಎಂಬ ಬಿಲ್ ಪಾಸ್ ಮಾಡಿರುವುದನ್ನು ಖಂಡಿಸಿದರು.
1972 ರ ಪಿಂಚಣಿ ಕಾಯ್ದೆಗೆ ತಿದ್ದುಪಡಿ ತಂದು ಈ ಬಿಲ್ ಪಾಸ್ ಮಾಡಲು ಹೊರಟಿದೆ. 1983 ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಸಂವಿಧಾನ ಪೀಠದ ತೀರ್ಪಿನ ಪ್ರಕಾರ ಪಿಂಚಣಿಯನ್ನು ಪರಿಷ್ಕರಿಸಿ ಹಳಬರು ಮತ್ತು ಹೊಸಬರಿಗೆ ಯಾವುದೇ ತಾರತಮ್ಯ ಇಲ್ಲದಂತೆ ಮಹತ್ವದ ತೀರ್ಪು ನೀಡಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಅದರಂತೆ ಎಲ್ಲಾ ವೇತನ ಆಯೋಗದಲ್ಲಿ ಪಿಂಚಣಿ ಪರಿಷ್ಕರಣೆಗೆ ಸರ್ಕಾರ ಆದೇಶ ನೀಡಿತ್ತು. ಇದೀಗ ಕೇಂದ್ರಸರ್ಕಾರ ಇನ್ನು ಮುಂದಿನ ದಿನಗಳಲ್ಲಿ ಈ ರೀತಿಯ ಪರಿಷ್ಕರಣೆ ಇಲ್ಲವೆಂದು ತೀರ್ಮಾನಿಸಿರುವುದನ್ನು ವಿರೋಧಿಸಿದರು.
ಸರ್ಕಾರದ ಈ ನಿರ್ಧಾರದಿಂದಾಗಿ ಪಿಂಚಣಿದಾರರಿಗೆ ಆಘಾತವಾಗಿದ್ದು, ಸತತ ಬೆಲೆ ಏರಿಕೆ ಹಾಗೂ ನಿವೃತ್ತರಿಗೆ ವಯೋಸಹಜ ಕಾಯಿಲೆಗಳು ಬರುತ್ತಿರುವುದರಿಂದ ಬದುಕು ದುಸ್ಥರವಾಗಿದೆ. ಈ ಎಲ್ಲಾ ಅಂಶಗಳನ್ನು ಕೇಂದ್ರ ಸರ್ಕಾರ ಪರಿಗಣಿಸಿ ಪಿಂಚಣಿ ಪರಿಷ್ಕರಿಸುವುದಿಲ್ಲ ಎಂಬ ಹುನ್ನಾರ ಸಂವಿಧಾನ ಬಾಹಿರ ಎಂದು ದೂರಿದರು.
ಈ ಸಂಬಂಧ ಸಂವಿಧಾನದಲ್ಲಿ ಪಿಂಚಣಿದಾರರಿಗೆ ರಕ್ಷಣೆ ನೀಡಿದ್ದು, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ನೇತೃತ್ವದ ಸಂವಿಧಾನ ಪೀಠ ಪಿಂಚಣಿಯಲ್ಲಿ ಯಾವುದೇ ತಾರತಮ್ಯ ಮಾಡುವ ಹಾಗಿಲ್ಲ, ಪಿಂಚಣಿ ಪರಿಷ್ಕರಣೆ ನಿರಂತರವಾಗಿರಬೇಕು ಎಂದು 1983 ರಲ್ಲಿ ಮಹತ್ವದ ತೀರ್ಪನ್ನು ಕೊಟ್ಟಿದ್ದು, ಈಗಿನ ಕೇಂದ್ರಸರ್ಕಾರ ಅದನ್ನು ಧಿಕ್ಕರಿಸಿ ಪಿಂಚಣಿ ಪರಿಷ್ಕರಣೆ ಮಾಡದಂತೆ ನಿರ್ಧರಿಸಿರುವುದನ್ನು ಖಂಡಿಸಿದರು.
ಸರ್ಕಾರದ ಈ ಕಾರ್ಮಿಕ ವಿರೋಧಿ ನೀತಿಯನ್ನು ಪ್ರತಿಭಟಿಸಿ ದೇಶಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಇದರ ಭಾಗವಾಗಿ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ಈ ನಮ್ಮ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ದೊರಕಿಸುವಂತೆ ವಿನಂತಿಸಿದ್ದಾರೆ.
ಪ್ರತಿಭಟನೆಯಲ್ಲಿ ಕಾಫಿ ಮಂಡಳಿ ನಿವೃತ್ತ ಸಂಪರ್ಕಾಧಿಕಾರಿ ಅಬೂಬಕರ್ ಸಿದ್ಧಿಕ್, ಬಿಎಸ್‌ಎನ್‌ಎಲ್ ನಿವೃತ್ತ ನೌಕರರಾದ ಹಿರಿಯಣ್ಣ, ರಾಘವೇಂದ್ರ, ಅಧ್ಯಕ್ಷ ಶಿವಣ್ಣ, ಕಾಫಿಬೋರ್ಡ್‌ನ ರಾಜೇಂದ್ರ, ಜಯಚಂದ್ರ ಮತ್ತಿತರರು ಭಾಗವಹಿಸಿದ್ದರು.



