ಮೂಡಿಗೆರೆ ಪಟ್ಟಣದ ವಿದ್ಯಾನಗರದಲ್ಲಿ ಪ್ರತಿ ಶುಕ್ರವಾರ ನಡೆಯುವ ವಾರದ ಸಂತೆ ಜನರಿಗೆ ಅನುಕೂಲವಾಗಬೇಕೆಂಬ ದೃಷ್ಟಿಯಿಂದ ಕೆಲ ಬದಲಾವಣೆ ತರಲಾಗಿದೆ ಎಂದು ಪ.ಪಂ. ಅಧ್ಯಕ್ಷ ಕೆ.ವೆಂಕಟೇಶ್ ಹೇಳಿದರು.
ಅವರು ಗುರುವಾರ ಸಂಜೆ ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಮಾರಾಟದ ಮಳಿಗೆಗಳ ನಾಮಫಲಕ ಅಳವಡಿಸುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ವಾರದ ಸಂತೆ ನಡೆಯುವ ಸಂದರ್ಭದಲ್ಲಿ ಪಟ್ಟಣದಿಂದ ವಿದ್ಯಾನಗರದವರೆಗೆ ವ್ಯಾಪಾರಸ್ಥರು ಸರಕು ಸಾಮಾನು ತಂದು ರಸ್ತೆ ಬದಿಯಲ್ಲಿಯೇ ಹಾಕಿ ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ. ಅಲ್ಲದೇ ಡಿಎಸ್‍ಬಿಜಿ ಪ್ರಥಮ ದರ್ಜೆ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದೆ. ಹಾಗಾಗಿ ಕೆಲ ಬದಲಾವಣೆ ತರಲಾಗಿದೆ ಎಂದು ಹೇಳಿದರು.
ಎಲ್ಲೆಂದರಲ್ಲಿ ವ್ಯಾಪಾರ ಮಾಡುವುದಕ್ಕೆ ಕಡಿವಾಣ ಹಾಕಲಾಗಿದೆ. ತರಕಾರಿ, ದಿನಸಿ, ಹಸಿ ಮತ್ತು ಒಣ ಮೀನು, ಹಣ್ಣು, ಬಟ್ಟೆ ವ್ಯಾಪಾರ ಒಂದೇ ಕಡೆ ಗ್ರಾಹಕರಿಗೆ ಸಿಗುವಂತೆ ಎಲ್ಲಾ ಕಡೆ ನಾಮಫಲಕ ಅಳವಡಿಸಲಾಗಿದೆ. ಅಲ್ಲದೇ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ವ್ಯಾಪಾರಿಗಳು ರಸ್ತೆ ಬಿಟ್ಟು ನಿಗದಿ ಪಡಿಸಿರುವ ಸ್ಥಳದಲ್ಲಿಯೇ ವ್ಯಾಪಾರ ಮಾಡಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.
ಉಪಾಧ್ಯಕ್ಷ ರಮೇಶ್, ಸದಸ್ಯ ಹಂಜಾ, ಇಂಜಿನಿಯರ್ ಇರ್ಷಾಧ್ ಮತ್ತಿತರಿದ್ದರು.



