ಮೂಡಿಗೆರೆ ಕ್ಷೇತ್ರದ ಶಾಸಕರು ತಾಲೂಕಿನಲ್ಲಿ 100 ಎಕರೆ ಭೂಮಿಯನ್ನು ನಿವೇಶನಕ್ಕಾಗಿ ಕಾಯ್ದಿರಿಸಿದ್ದಾರೆಂದು ಬ್ಲಾಕ್ ಕಾಂಗ್ರೆಸ್ ಎಸ್ಸೀ ಘಟಕದ ಅಧ್ಯಕ್ಷ ಎಚ್.ಎಸ್.ಸುಧೀರ್ ಅವರು ಹೇಳಿಕೆ ನೀಡಿದ್ದಾರೆ. ಆದರೆ ಆ ಭೂಮಿ ಎಲ್ಲಿ ಮೀಸಲಿಟ್ಟಿದ್ದಾರೆ ಎಂದು ದಾಖಲೆ ಸಮೇತ ಶೀಘ್ರದಲ್ಲಿಯೇ ಬಹಿರಂಗ ಚರ್ಚೆಗೆ ಬರಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ಶಾಸಕರ ಕಚೇರಿ ಎದುರು ಧರಣಿ ನಡಸಲಾಗುವುದು ಎಂದು ವಸತಿಗಾಗಿ ಹೋರಾಟ ವೇದಿಕೆ ಗೌರವಾಧ್ಯಕ್ಷ ಬಿ.ರುದ್ರಯ್ಯ ಎಚ್ಚರಿಕೆ ನೀಡಿದರು.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಸತಿಗಾಗಿ ಹೋರಾಟ ವೇದಿಕೆಯಿಂದ ಕಳೆದ 15 ವರ್ಷದಿಂದ ನಿವೇಶನಕ್ಕಾಗಿ ಹೋರಾಟ ಮಾಡಿಕೊಂಡು ಬಂದಿದ್ದು, ಅಂದಿನಿಂದ ಇದೂವರೆಗೂ ಆಡಳಿತ ನಡೆಸಿದ ಶಾಸಕರು ಮತ್ತು ಅಧಿಕಾರಿಗಳು ನಿವೇಶನ ನೀಡುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ತಾವೇ ಭೂಮಿ ಗುರುತಿಸಿ ಟೆಂಟ್ ನಿರ್ಮಿಸಿಕೊಳ್ಳುವ ಅನಿವಾರ್ಯತೆ ಉಂಟಾಗಿದೆ. ಇಲ್ಲಿನ ಶಾಸಕರು ತಾಲೂಕಿನಲ್ಲಿ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನಕ್ಕೆ ಭೂಮಿ ಮೀಸಲಿರಿಸಲಾಗಿದೆ ಎಂದು ಹೇಳಿದ್ದರು. ಅದು ಭೂ ಲೋಕದಲ್ಲೋ ಅಥವಾ ಚಂದ್ರಲೋಕದಲ್ಲೋ ? ಎಂದು ಪ್ರಶ್ನೆ ಮಾಡಿದ್ದಕ್ಕೆ ಕಾಂಗ್ರೆಸ್‍ನ ಎಸ್ಸೀ ಘಟಕದ ಅಧ್ಯಕ್ಷ ಸುಧೀರ್ ಅವರು ಶಾಸಕರನ್ನು ಓಲೈಸುವ ಸಲುವಾಗಿ 100 ಎಕರೆ ಭೂಮಿ ಮೀಸಲಿರಿಸಿದ್ದಾರೆಂದು ಹೇಳಿಕೆ ನೀಡಿದ್ದಾರೆ. ಆ ಭೂಮಿ ಎಲ್ಲೆದೆ ಎಂದು ದಾಖಲೆ ಸಮೇತ ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದರು.
ಮೂಡಿಗೆರೆ ಕ್ಷೇತ್ರವನ್ನು ಪ್ರತಿನಿಧಿಸಿದ ಜನಪ್ರತಿನಿಧಿಗಳು ಭೂ ಮಾಲೀಕರ ಪರವಾಗಿ ಧ್ವನಿ ಮಾಡುತ್ತಿದ್ದಾರೆಯೆ ಹೊರತು ಇಲ್ಲಿರುವ ಶೇ.80 ರಷ್ಟು ಕಾರ್ಮಿಕರು, ಬಡವರ ಪರವಾಗಿ ಧ್ವನಿ ಎತ್ತುತ್ತಿಲ್ಲ. ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ ಇದೂವರೆಗೂ ಒಂದು ಅಂಬೇಡ್ಕರ್ ಭವನ ನಿರ್ಮಿಸಲು ಸಾಧ್ಯವಾಗಿಲ್ಲ. ಪಟ್ಟಣದಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಿಸಲು ಸಾಧ್ಯವಾಗಿಲ್ಲ.
ಫಾರಂ. ನಂ50, 53ಯಲ್ಲಿ ವಜಾಗೊಳ್ಳುತ್ತಿರುವ ಅರ್ಜಿಗಳು ಹೆಚ್ಚಾಗಿ ದಲಿತರು ಹಾಗೂ ಬಡವರದ್ದಾಗಿದೆ. ದಲಿತರ ಭೂಮಿ ಒತ್ತುವರಿಯಾಗಿದೆ. ಈ ಬಗ್ಗೆ ಎಸ್ಸೀ ಸೆಲ್ ಅಧ್ಯಕ್ಷರಿಗೆ ನೋವಾಗಿಲಿಲ್ಲವೇನೋ? ಶಾಸಕರ ವಿರುದ್ಧ ಮಾತನಾಡಿದಾಗ ಮಾತ್ರ ಅವರ ಸೆಲ್ ಚಾರ್ಜ್ ಆಗೋದು ಬಿಟ್ಟರೆ, ಬೇರೆ ದಿನ ಬ್ಯಾಟರಿ ಲೋ ಆಗಿಬಿಡುತ್ತೇನೋ? ಎಂದು ವ್ಯಂಗ್ಯವಾಡಿದರು, ನಾವು ತಾಲೂಕಿನ ಘನತೆ ಹೆಚ್ಚಿಸಲು ಹೋರಾಟ ಮಾಡುತ್ತಿದ್ದೇವೆ ಹೊರತು ಮರ್ಯಾದೆ ತೆಗೆಯುವುದಕ್ಕಲ್ಲ ಎಂದು ಎಸ್ಸೀ ಸೆಲ್ ಅಧ್ಯಕ್ಷರು ಅರ್ಥ ಮಾಡಿಕೊಳ್ಳಬೇಕೆಂದು ಹೇಳಿದರು.
ಟಿಯುಸಿಐ ಅಧ್ಯಕ್ಷ ಕೆ.ಕೆ.ಕೃಷ್ಣಪ್ಪ, ವಸತಿಗಾಗಿ ಹೋರಾಟ ವೇದಿಕೆ ಕಾರ್ಯದರ್ಶಿ ಶಿವಪ್ಪ, ಹರೀಶ್ ನಲಿಕೆ, ಸುರೇಶ್ ಹಾಂದಿ ಉಪಸ್ಥಿತರಿದ್ದರು.



