dgp1

 

 

ನಿವೃತ್ತ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಓಂಪ್ರಕಾಶ್‌ (68) ಅವರನ್ನು ಪತ್ನಿಯೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಭಾನುವಾರ ನಡೆದಿದೆ. ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ವಾಸವಾಗಿದ್ದ ಓಂ ಪ್ರಕಾಶ್‌ ಅವರ ಹತ್ಯೆ ಭಾನುವಾರ ಮಧ್ಯಾಹ್ನ ಸುಮಾರು 3.30ಕ್ಕೆ ನಡೆದಿದ್ದು, ಘಟನೆ ಸಂಬಂಧ ಮೃತರ ಪತ್ನಿ ಪಲ್ಲವಿ ಹಾಗೂ ಪುತ್ರಿ ಕೃತಿ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಆಸ್ತಿ ವಿಚಾರ ಸಂಬಂಧ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ.

ಬಿಹಾರ ಮೂಲದ ಓಂ ಪ್ರಕಾಶ್‌ 1981ರ ಬ್ಯಾಚ್‌ನ ಕರ್ನಾಟಕ ಕೇಡರ್‌ ಐಪಿಎಸ್ ಅಧಿಕಾರಿಯಾಗಿದ್ದರು. ರಾಜ್ಯದ ವಿವಿಧ ಜಿಲ್ಲೆ ಹಾಗೂ ನಗರ ಮತ್ತು ಪೊಲೀಸ್‌ ಇಲಾಖೆಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದರು. 2015ರಲ್ಲಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿ 2017ರಲ್ಲಿ ನಿವೃತ್ತರಾಗಿದ್ದರು. ನಿವೃತ್ತಿ ಬಳಿಕ ಎಚ್ಎಸ್‌ಆರ್‌ ಲೇಔಟ್‌ನ ಮೂರು ಅಂತಸ್ತಿನ ಮನೆಯಲ್ಲಿ ಕುಟುಂಬದೊಂದಿಗೆ ನೆಲೆಸಿದ್ದರು.

ಕೊಲೆ ಮಾಡಿ ಸ್ನೇಹಿತೆಗೆ ಕರೆ:

ಭಾನುವಾರ ಮನೆಯಲ್ಲಿ ಓಂ ಪ್ರಕಾಶ್‌, ಪತ್ನಿ ಪಲ್ಲವಿ ಹಾಗೂ ಪುತ್ರಿ ಇದ್ದರು ಎನ್ನಲಾಗಿದೆ. ಮಧ್ಯಾಹ್ನ ದಂಪತಿ ನಡುವೆ ಗಲಾಟೆಯಾಗಿದೆ. ಈ ವೇಳೆ ಪತ್ನಿ ಪಲ್ಲವಿ ಚಾಕುವಿನಿಂದ ಇರಿದು ಒಂ ಪ್ರಕಾಶ್‌ ಅವರನ್ನು ಕೊಲೆ ಮಾಡಿದ್ದಾರೆ. ಬಳಿಕ ಸ್ನೇಹಿತೆಯಾಗಿರುವ ಮಾಜಿ ಐಪಿಎಸ್‌ ಅಧಿಕಾರಿಯೊಬ್ಬರ ಪತ್ನಿಗೆ ವಿಡಿಯೋ ಕರೆ ಮಾಡಿ ‘ಐ ಕಿಲ್ಲಡ್‌ ಮಾನ್‌ಸ್ಟರ್‌’ ಎಂದು ಹೇಳಿದರು ಎನ್ನಲಾಗಿದೆ. ಬಳಿಕ ಆ ಮಾಜಿ ಐಪಿಎಸ್‌ ಅಧಿಕಾರಿ ಪತ್ನಿ ಗಾಬರಿಗೊಂಡು ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರು ಎನ್ನಲಾಗಿದೆ.

ಓಂ ಪ್ರಕಾಶ್‌ ಕೊಲೆ ವಿಚಾರ ತಿಳಿದು ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪೊಲೀಸರು, ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ, ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌ ಸೇರಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಒಂ ಪ್ರಕಾಶ್‌ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೇಂಟ್‌ ಜಾನ್ಸ್‌ ಆಸ್ಪತ್ರೆಗೆ ಸಾಗಿಸಿದ್ದಾರೆ.

ಈ ವೇಳೆ ರಕ್ತಸಿಕ್ತ ಉಡುಪಿನಲ್ಲೇ ಮನೆಯಲ್ಲಿದ್ದ ಓಂ ಪ್ರಕಾಶ್‌ ಅವರ ಪತ್ನಿ ಪಲ್ಲವಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಮೃತರ ಪುತ್ರ ನೀಡಿದ ದೂರಿನ ಮೇರೆಗೆ ಎಚ್‌ಎಸ್‌ಆರ್‌ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ

ವಾಟ್ಸಾಪ್‌ ಗ್ರೂಪ್‌ನಲ್ಲಿ ಸಂದೇಶ

ಓಂ ಪ್ರಕಾಶ್‌ ಮತ್ತು ಅವರ ಪತ್ನಿ ಪಲ್ಲವಿ ನಡುವೆ ಕೌಟುಂಬಿಕ ವಿಚಾರವಾಗಿ ಹಲವು ವರ್ಷಗಳಿಂದ ಕಲಹಗಳು ನಡೆಯುತ್ತಿದ್ದೆವು ಎನ್ನಲಾಗಿದೆ. ಈ ವಿಚಾರವಾಗಿ ಪಲ್ಲವಿ ಅವರು ತಮ್ಮ ಸ್ನೇಹಿತೆಯರು ಹಾಗೂ ಸಂಬಂಧಿಕರ ವಾಟ್ಸಾಪ್‌ ಗ್ರೂಪ್‌ಗೆ ಸಂದೇಶಗಳನ್ನು ಹಾಕುತ್ತಿದ್ದರು ಎನ್ನಲಾಗಿದೆ.

ಆಸ್ತಿ ವಿಚಾರಕ್ಕೆ ಗಲಾಟೆ?

ಕೊಲೆಯಾದ ಓಂ ಪ್ರಕಾಶ್‌ ರಾವ್‌ ಬೆಂಗಳೂರು, ಬೆಂಗಳೂರು ಹೊರವಲಯ ಸೇರಿ ರಾಜ್ಯದ ವಿವಿಧೆಡೆ ತಮ್ಮ ಪುತ್ರ, ತಂಗಿಯರು ಸೇರಿ ಕೆಲ ಸಂಬಂಧಿಕರು ಹಾಗೂ ಸ್ನೇಹಿತರ ಹೆಸರಿನಲ್ಲಿ ಸಾಕಷ್ಟು ಆಸ್ತಿ ಮಾಡಿದ್ದರು. ಈ ವಿಚಾರವಾಗಿ ದಂಪತಿ ನಡುವೆ ಆಗಾಗ ಗಲಾಟೆಗಳು ಆಗುತ್ತಿದ್ದವು.   ಆಸ್ತಿ ವಿಚಾರದ ಗಲಾಟೆ ಬಗ್ಗೆಯೂ ಪಲ್ಲವಿ ಸ್ನೇಹಿತೆಯರ ಜತೆಗೆ ಹೇಳಿಕೊಳ್ಳುತ್ತಿದ್ದರು ಎನ್ನಲಾಗಿದೆ.

10ಕ್ಕೂ ಅಧಿಕ ಬಾರಿ ಇರಿದು ಕೊಲೆ

ಮೂರು ಅಂತಸ್ತಿನ ಮನೆಯಲ್ಲಿ ನೆಲ ಮಹಡಿಯ ಹಾಲ್‌ನಲ್ಲಿ ಓಂ ಪ್ರಕಾಶ್‌ ಅವರ ಕೊಲೆಯಾಗಿದೆ. ಎದೆ, ಹೊಟ್ಟೆ, ಕೈ ಸೇರಿ ದೇಹದ ಇತರೆ ಭಾಗಗಳಿಗೆ 10ಕ್ಕೂ ಅಧಿಕ ಬಾರಿ ಇರಿದು ಕೊಲೆ ಮಾಡಲಾಗಿದೆ. ಚಾಕು ಇರಿತದಿಂದ ಇಡೀ ಹಾಲ್‌ನಲ್ಲಿ ರಕ್ತ ಹರಿದಿದೆ. ಚಾಕು ಇರಿತದ ಬಳಿಕ ಸುಮಾರು 10-15 ನಿಮಿಷ ಓಂ ಪ್ರಕಾಶ್‌ ರಕ್ತದ ಮಡುವಿನಲ್ಲಿ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ 36 ವರ್ಷ ಸೇವೆ

ಬಿಹಾರದ ಚಂಪಾರಣ್‌ ಜಿಲ್ಲೆಯ ಓಂ ಪ್ರಕಾಶ್‌ ಅವರು 1981ನೇ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಐಪಿಎಸ್‌ ಅಧಿಕಾರಿಯಾಗಿ ಹರಪನಹಳ್ಳಿ ಉಪವಿಭಾಗದ ಎಎಸ್ಪಿಯಾಗಿ ಸೇವೆ ಆರಂಭಿಸಿದ್ದರು. ಬಳಿಕ ರಾಜ್ಯ ಜಾಗೃತ ಆಯೋಗ, ಕರ್ನಾಟಕ ಲೋಕಾಯುಕ್ತ ಎಸ್ಪಿ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದರು. ಡಿಐಜಿ( ಆಡಳಿತ), ಡಿಐಜಿ ಉತ್ತರ ವಲಯ, ಡಿಐಜಿ(ತರಬೇತಿ), ಐಜಿಪಿ, ಐಸಿಡಿ ಐಜಿಪಿ, ಸಾರಿಗೆ ಇಲಾಖೆ ಆಯುಕ್ತರಾಗಿಯೂ ಕೆಲಸ ಮಾಡಿದ್ದರು. ಎಡಿಜಿಪಿ (ಅಪರಾಧ), ಡಿಜಿ(ಡಿಸಿಆರ್‌ಇ), ಡಿಜಿ ಅಗ್ನಿಶಾಮಕ ಸೇರಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಾಗಿ ಎರಡು ವರ್ಷ ಕೆಲಸ 2017ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು.

ಈ ಘಟನೆ ರಾಜ್ಯವನ್ನು ಬೆಚ್ಚಿಬೀಳಿಸಿದ್ದು, ರಾಜ್ಯದ ಪೊಲೀಸ್ ಇಲಾಖೆಯ ಮುಖ್ಯಸ್ಥರಾಗಿದ್ದವರೊಬ್ಬರು ಹೀಗೆ ತನ್ನ ಪತ್ನಿಯಿಂದಲೇ ಹತ್ಯೆಯಾಗಿರುವುದು ವಿಚಿತ್ರವಾದ ಘಟನೆಯಾಗಿದೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ