ಜಮ್ಮು-ಕಾಶ್ಮೀರದ ಪಹಲ್ಗಾಮ್‌ದಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ನಡೆದ ಉಗ್ರರ ಗುಂಡಿನ ದಾಳಿಯಲ್ಲಿ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಮೃತಪಟ್ಟಿದ್ದಾರೆ. ಶಿವಮೊಗ್ಗದ ವಿಜಯನಗರ ನಿವಾಸಿ, ಮಂಜುನಾಥ್ ಮೃತ ದುರ್ದೈವಿ. ಉದ್ಯಮಿ ಮಂಜುನಾಥ ಅವರ ಪತ್ನಿ ಪಲ್ಲವಿ ಮತ್ತು ಪುತ್ರ ಸುರಕ್ಷಿತವಾಗಿದ್ದಾರೆ.
ಮೃತ ಮಂಜುನಾಥ್ ತನ್ನ ಪತ್ನಿ ಪಲ್ಲವಿ ಮತ್ತು ಮಗನೊಂದಿಗೆ ಏಪ್ರಿಲ್ 19ರಂದು ಜಮ್ಮು ಕಾಶ್ಮೀರ ಪ್ರವಾಸಕ್ಕೆ ಬಂದಿದ್ದರು. ಈ ಬಗ್ಗೆ ಮಾಧ್ಯಮದೊಂದಿಗೆ ಮಾಹಿತಿ ಹಂಚಿಕೊಂಡಿರುವ ಪತ್ನಿ ಪಲ್ಲವಿ ನನ್ನ ಕಣ್ಣೆದುರಿಗೆ ನನ್ನ ಪತಿ ಮೃತಪಟ್ಟಿದ್ದಾರೆ. ನನ್ನ ಗಂಡನನ್ನ ಸಾಯಿಸಿ ನನ್ನ ಮಗನಿಗೆ ಬೈದು ಹಲ್ಲೆ ಮಾಡಿದ್ದಾರೆ. ನನ್ನ, ನನ್ನ ಮಗನನ್ನೂ ಕೊಂದು ಬಿಡು ಎಂದು ಹೇಳಿದ್ವಿ. ನಿನ್ನ ಕೊಲ್ಲಲ್ಲ ಹೋಗಿ ಮೋದಿಗೆ ಹೇಳು ಎಂದು ಹೇಳಿದರು. ನನ್ನ ಪತಿ ಕೊಂದು ಉಗ್ರರು ಅಲ್ಲೇ ಓಡಾಡುತ್ತಿದ್ದರು ಎಂದು ಹೇಳಿದ್ದಾರೆ.
ಮಂಜುನಾಥ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ, ಶಿವಮೊಗ್ಗದ ನಿವಾಸದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮಂಜುನಾಥ್ ಪತ್ನಿ ಪಲ್ಲವಿಯವರು ಮಲ್ನಾಡ್ ಅಡಕೆ ಮಾರ್ಕೆಟಿಂಗ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ನ ಬೀರೂರು ಬ್ರ್ಯಾಂಚ್ನಲ್ಲಿ ಮ್ಯಾನೇಜರ್ ಆಗಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳವಾರ ಮಧ್ಯಾಹ್ನ 2:30 ಕ್ಕೆ ದಾಳಿ ನಡೆದಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದು. ಲಷ್ಕರ್-ಎ-ತೊಯ್ಬಾದ ಒಂದು ಶಾಖೆಯಾದ ರೆಸಿಸ್ಟೆನ್ಸ್ ಫ್ರಂಟ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಇನ್ನು ಈ ಕುರಿತು ಗೃಹ ಸಚಿವ ಅಮಿತ್ ಶಾ ತುರ್ತು ಸಭೆ ಕರೆದಿದ್ದು. ಪ್ರಧಾನಿ ಮೋದಿಯೊಂದಿಗೂ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.



