ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಪಹಲ್ಗಾಮ್ ನಬೈಸರನ್ ಕಣಿವೆಯಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ.
ಕಣಿವೆಗಳಿಂದ ಕೂಡಿದ ಸುಂದರ ಪ್ರವಾಸಿ ತಾಣದಲ್ಲಿ ಮರಗಳ ನಡುವಿನಿಂದ ಭದ್ರತಾ ಸಿಬ್ಬಂದಿಗಳ ವೇಷ ಹಾಕಿ ಬಂದ ಉಗ್ರರು, ಪ್ರವಾಸಿಗರ ರಕ್ತದೋಕುಳಿ ಹರಿಸಿದ್ದಾರೆ. ಕಂಡ ಕಂಡಲ್ಲಿ ವಿಶೇಷವಾಗಿ ಪುರುಷರನ್ನೇ ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ದೇಶದ ವಿವಿಧ ಕಡೆಗಳಿಂದ ಪ್ರವಾಸಕ್ಕೆ ತೆರಳಿದ್ದ 26ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಇವರಲ್ಲಿ ಇಬ್ಬರು ವಿದೇಶಿಗರು ಸೇರಿದ್ದಾರೆ.
ನಾಲ್ಕೈದು ಮಂದಿ ಇದ್ದ ಉಗ್ರರ ಗುಂಪು ಪ್ರವಾಸಿಗಳನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದ್ದು, ನೋಡ ನೋಡುತ್ತಿದ್ದಂತೆ ಹೆಣಗಳ ರಾಶಿ ಬಿದ್ದಿದ್ದು, ನೋವು, ನರಳಾಟ ಮುಗಿಲುಮುಟ್ಟಿದೆ. ಗುಂಡಿನ ದಾಳಿ ನಡೆದ ಸ್ಥಳದ ವಿಡಿಯೋದಲ್ಲಿ ಅನೇಕರು ಪ್ರಾಣ ಕಳೆದುಕೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರೆ, ತನ್ನವರನ್ನು ಕಳೆದುಕೊಂಡ ಮಹಿಳೆಯರು ನೋವು, ದು:ಖದಲ್ಲಿ ಅಳುತ್ತಿರುವುದು ಕಂಡುಬಂದಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಭದ್ರತಾ ಪಡೆ ಹಾಗೂ ವೈದ್ಯಕೀಯ ತಂಡಗಳು ಸಂತ್ರಸ್ತರಿಗೆ ನೆರವಾಗಿದ್ದಾರೆ. ಗಾಯಾಳುಗಳನ್ನು ಕುದುರೆಗಳ ಮೂಲಕ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಗುಂಡಿನ ದಾಳಿಯಲ್ಲಿ ಇಬ್ಬರು ಕನ್ನಡಿಗರ ಬಲಿ: ಉಗ್ರರ ಗುಂಡಿನ ದಾಳಿಗೆ ಇಬ್ಬರು ಕನ್ನಡಿಗರು ಬಲಿಯಾಗಿದ್ದಾರೆ. ಮೂಲತಃ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಪ್ರಸ್ತುತ ಶಿವಮೊಗ್ಗದಲ್ಲಿ ನೆಲೆಸಿರುವ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಮಂಜುನಾಥ್ ಹಾಗೂ ಬೆಂಗಳೂರಿನಲ್ಲಿ ವಾಸವಿದ್ದ ಹಾವೇರಿ ಮೂಲದ ಭರತ್ ಭೂಷಣ್ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ವ್ಯಾಪಕ ಖಂಡನೆ : ಉಗ್ರರ ಈ ದುಷ್ಕೃತ್ಯಕ್ಕೆ ಜಗತ್ತಿನಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ಪುಟಿನ್ ಸೇರಿದಂತೆ ವಿಶ್ವನಾಯಕರು ಘಟನೆಯನ್ನು ಖಂಡಿಸಿದ್ದಾರೆ. ಉಗ್ರರ ವಿರುದ್ಧದ ಹೋರಾಟಕ್ಕೆ ಬೆಂಬಲ ಘೋಷಿಸಿದ್ದಾರೆ.
ಇನ್ನೂ ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಸೌದಿ ಅರೇಬಿಯಾ ಭೇಟಿಯನ್ನು ಅರ್ಧದಲ್ಲಿಯೆ ಮೊಟಕುಗೊಳಿಸಿ ಭಾರತಕ್ಕೆ ಹಿಂತಿರುಗುವುದಾಗಿ ಹೇಳಿದ್ದಾರೆ.
ಗೃಹಸಚಿವ ಅಮಿತ್ ಶಾ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಘಟನೆಗೆ ಕಾರಣರಾದವರಿಗೆ ತಕ್ಕ ಶಾಸ್ತಿ ಮಾಡುವುದಾಗಿ ಹೇಳಿದ್ದಾರೆ.



