ಕಾಂಗ್ರೇಸ್ ಪಕ್ಷ ಸಮಾಜದ ಎಲ್ಲಾ ಸಮುದಾಯಗಳನ್ನು ಒಳಗೊಂಡಿದ್ದು, ಯಾವುದೇ ತಾರತಮ್ಯವಿಲ್ಲದೇ ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ. ಕಾಂಗ್ರೇಸ್ ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳವಾಗಿದ್ದು, ಕಾರ್ಯಕರ್ತರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಹೆಮ್ಮೆ ಇರಬೇಕಾಗಿದ್ದು, ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಮುತುವರ್ಜಿ ವಹಿಸಬೇಕು ಎಂದು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಕರೆನೀಡಿದ್ದಾರೆ.
ಅವರು ಮಂಗಳವಾರ ಪಟ್ಟಣದ ರೈತ ಭವನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಏರ್ಪಡಿಸಿದ್ದ ಸರಕಾರದ ನಡೆ ಕಾರ್ಯಕರ್ತರ ಕಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ನುಡಿದಂತೆ ನಡೆದಿದ್ದು, 5 ಗ್ಯಾರಂಟಿ ಯೋಜನೆಯನ್ನು ಕೇವಲ 6 ತಿಂಗಳಲ್ಲಿ ಅನುಷ್ಟಾನಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ಈ ಪಂಚ ಗ್ಯಾರಂಟಿ ಯೋಜನೆ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗಿದ್ದರಿಂದ ವಿರೋಧ ಪಕ್ಷದ ಟೀಕೆ ಟಿಪ್ಪಣಿ ಸದ್ದಿಲ್ಲದಂತೆ ಮಾಯವಾಗಿದೆ ಎಂದ ಅವರು, ತಾನು ಶಾಸಕಿಯಾದ ಮೊದಲ ವರ್ಷ ಕ್ಷೇತ್ರಕ್ಕೆ 93 ಕೋಟಿ, ಎರಡನೇ ವರ್ಷ 171 ಕೋಟಿ ಸರಕಾರದಿಂದ ಮಂಜೂರು ಮಾಡಿದ್ದು, ಕ್ಷೇತ್ರದಲ್ಲಿ ವ್ಯಾಪಕ ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಕಾಡಾನೆ ಹಾವಳಿ ತಪ್ಪಿಸಲು 40 ಕಿಮೀ ಟೆಂಟಿಕಲ್ ಫೆನ್ಸಿನ್ ಮಾಡಲಾಗುತ್ತಿದೆ. ಕಳಸ ಭಾಗದಲ್ಲಿ 20 ಸೇತುವೆ ನಿರ್ಮಿಸಲಾಗಿದೆ. ನಿವೇಶನ ಸಮಸ್ಯೆ ಕೂಡ ಹಂತ ಹಂತವಾಗಿ ಬಗೆಹರಿಸಲಾಗುತ್ತಿದೆ. ಇನ್ನು ಅನೇಕ ಅಭಿವೃದ್ಧಿ ಕಾರ್ಯ ನಡೆಯಬೇಕಿದೆ. ಮುಂದಿನ ದಿನದಲ್ಲಿ ಎಲ್ಲಾ ಕ್ಷೇತ್ರದ ಎಲ್ಲಾ ಸಮಸ್ಯೆ ಬಗೆಹರಿಸಿ ಮಾದರಿ ಕ್ಷೇತ್ರವನ್ನಾಗಿ ಮಾಡುವೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಕಾಂಗ್ರೇಸ್ ಕಾರ್ಯಕರ್ತರನ್ನು ಪ್ರತಿಹಂತದಲ್ಲಿಯೂ ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ. ಅಭಿವೃದ್ಧಿ ಕಾರ್ಯಗಳ ಅನುಷ್ಠಾನ ಮಾಡುವಾಗ ಸ್ಥಳೀಯ ನಾಯಕರ, ಪದಾಧಿಕಾರಿಗಳ ಅಭಿಪ್ರಾಯ ಕೇಳಲಾಗುತ್ತಿದೆ. 150ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಿವಿಧ ಸಮಿತಿಗಳಿಗೆ ನಾಮನಿರ್ದೇಶನ ಮಾಡಲಾಗಿದೆ ಎಂದಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ; ಹಿಂದಿನಿಂದಲೂ ಕಾಂಗ್ರೆಸ್‍ನಲ್ಲಿ ಉತ್ತಮ ನಾಯಕರಿರುವುದರಿಂದ ಕಾಂಗ್ರೇಸ್ ಮುಕ್ತ ಭಾರತ ಮಾಡಲು ಯಾವತ್ತಿಗೂ ಸಾಧ್ಯವಿಲ್ಲ. ಮುಂದೆ ರಾಹುಲ್ ಗಾಂಧಿ ಅವರು ಪ್ರಧಾನಿಯಾಗುವ ಮೂಲಕ ದೇಶದಲ್ಲಿ ಜನ ಹಿತ ಕಾಯಿದೆ ಜಾರಿಗೆ ತರುವುದು ಗ್ಯಾರಂಟಿ. ರೈತರು, ಕೂಲಿ ಕಾರ್ಮಿಕರು, ಬಡವರ ಪ್ರಗತಿಗಾಗಿ ಜನಪರವಾದ ಯೋಜನೆ ರೂಪಿಸುತ್ತಿರುವ ಪಕ್ಷ ವೊಂದಿದ್ದರೆ ಅದು ಕಾಂಗ್ರೆಸ್ ಮಾತ್ರ ಎಂಬುದು ಜನರಿಗೆ ಅರ್ಥವಾಗಿದೆ. ಆದರೆ ಹಿಂದುತ್ವದ ಹೆಸರಿನಲ್ಲಿ ಹಾಗೂ ರಾಜಕೀಯವನ್ನು ಜೀವನೋಪಾಯಕ್ಕೆ ಬಳಸಿಕೊಳ್ಳುವುದನ್ನು ಜನ ಒಪ್ಪಿಕೊಳ್ಳುವುದಿಲ್ಲ. ಕಾಂಗ್ರೆಸ್‍ನಲ್ಲಿ ಕೆಲವೇ ಕೆಲ ವ್ಯಕ್ತಿಗಳು ಅಲ್ಪಸಂಖ್ಯಾತರು ಅಧಿಕಾರದಲ್ಲಿದ್ದಾರೆ. ಆದರೆ ಶೇ.88 ರಷ್ಟು ಹಿಂದೂಗಳೆ ಶಾಸಕರು, ಮಂತ್ರಿಗಳಾಗಿದ್ದಾರೆ. ಎಲ್ಲರೂ ವಯಕ್ತಿಕ ಲಾಭ ಮರೆತು ಪಕ್ಷ ಬೆಳವಣಿಗೆ ಹಾಗೂ ಜನರ ಹಿತಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ರಾಷ್ಟ್ರ ಉಳಿವಿಗಾಗಿ ಕಾಂಗ್ರೆಸ್ ಆಡಳಿತಕ್ಕೆ ಬರಬೇಕೆಂದು ಹೇಳಿದರು.
ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಂ. ಸಂದೀಪ್ ಮಾತನಾಡಿದರು. ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಶಿವಾನಂದಸ್ವಾಮಿ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಬಿ.ಎಸ್.ಜಯರಾಂ, ಪ .ಪಂ. ಅಧ್ಯಕ್ಷ ಕೆ. ವೆಂಕಟೇಶ್, ಉಪಾಧ್ಯಕ್ಷ ರಮೇಶ್ ಹೊಸಕೆರೆ, ನಿಖಿಲ್ ರಾಜ್ ಮೌರ್ಯ, ಮಹೇಶ್ ಹಾಸನ, ಸುರೇಶ್ ಆಲ್ದೂರು, ಡಿ.ಕೆ. ಉದಯಶಂಕರ್, ಕಮಲಾಕ್ಷಮ್ಮ, ಹಾಜಿ ಅಕ್ರಂ, ಮುದಾಸಿರ್, ಶ್ರೇಣಿಕ್, ಎ.ಜಿ. ಸುಬ್ರಾಯಗೌಡ, ಸಿ.ಕೆ. ಇಬ್ರಾಹಿಂ, ಸಂಪತ್, ಸುಬ್ರಮಣ್ಯ, ಶಂಕರ್, ಸುರೇಂದ್ರ, ಪಟ್ಟಣ ಪಂಚಾಯಿತಿ ಸದಸ್ಯರು, ಕಾಂಗ್ರೇಸ್ ಹೋಬಳಿ ಅಧ್ಯಕ್ಷರುಗಳು, ವಿವಿಧ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು ಮತ್ತಿತರರಿದ್ದರು.



