ಜನವಸತಿ ಪ್ರದೇಶಕ್ಕೆ ಪದೇ ಪದೇ ಲಗ್ಗೆ ಇಡುತ್ತಿದ್ದ ಮತ್ತು ಜನರ ಮೇಲೆ ಎರಗಿ ಬರುತ್ತಿದ್ದ ಕಾಡಾನೆಯೊಂದನ್ನು ಸೋಮವಾರ ಸೆರೆಹಿಡಿಯಲಾಗಿದೆ.
ಚಿಕ್ಕಮಗಳೂರು ತಾಲ್ಲೂಕಿನ ಆಲ್ದೂರು ಹೋಬಳಿ ಹಾಂದಿ ಗ್ರಾಮದಲ್ಲಿ ಈ ಕಾಡಾನೆಯನ್ನು ಸೆರೆಹಿಡಿಯಲಾಗಿದೆ.
ಈ ಮರಿಯಾನೆ ಮೂಡಿಗೆರೆ ಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಪ್ರವೇಶಿಸಿ ಕಳೆದ ಅನೇಕ ದಿನಗಳಿಂದ ಜನರಲ್ಲಿ ಆತಂಕ ಮೂಡಿಸಿತ್ತು.
ಕಳೆದ ಕೆಲ ದಿನಗಳಿಂದ ಈ ಆನೆ ಗುಂಪಿನಿಂದ ಬೇರ್ಪಟ್ಟಿದ್ದು ಒಂಟಿಯಾಗಿ ತಿರುಗುತ್ತಿತ್ತು. ಈ ಆನೆಯು ಜನವಸತಿ ಪ್ರದೇಶಕ್ಕೆ ಪದೇ ಪದೇ ಲಗ್ಗೆ ಇಡುತ್ತಿದ್ದು, ಮನುಷ್ಯರ ಮೇಲೆಯೂ ದಾಳಿಗೆ ಪ್ರಯತ್ನಿಸಿತ್ತು. ಆನೆ ಕಾರ್ಯಪಡೆ ಸಿಬ್ಬಂದಿಯ ಮೇಲೆಯೂ ತಿರುಗಿ ಬರುತ್ತಿತ್ತು.
ಕಳೆದ ಒಂದು ವಾರದಿಂದ ಮೂಡಿಗೆರೆ ಪಟ್ಟಣದ ಆಸುಪಾಸಿನಲ್ಲಿಯೇ ಈ ಆನೆ ಸಂಚರಿಸುತ್ತಿತ್ತು. ಶುಕ್ರವಾರ ರಾತ್ರಿ ಮೂಡಿಗೆರೆ ಬಿಳಗುಳ ಕೊಲ್ಲಿಬೈಲ್ ಗ್ರಾಮಗಳಲ್ಲಿ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡು ಜನರ ಮೇಲೆ ದಾಳಿಮಾಡಲು ಪ್ರಯತ್ನಿಸಿತ್ತು. ಇತ್ತೀಚೆಗೆ ಮಾಕೋನಹಳ್ಳಿ ಸಮೀಪ ಬಾರದಹಳ್ಳಿ ಎಂಬಲ್ಲಿ ಮನೆಯ ಬಾಗಿಲಿನ ಸಮೀಪಕ್ಕೆ ಬಂದು ಮನೆಯವರ ಮೇಲೆ ದಾಳಿಮಾಡಲು ಪ್ರಯತ್ನಿಸಿತ್ತು.
ಈ ಆನೆ ಸಲಕೇಶಪುರ, ಬೇಲೂರು ತಾಲ್ಲೂಕುಗಳಲ್ಲಿಯೂ ಉಪಟಳ ನೀಡುತ್ತಿತ್ತು. ಇತ್ತೀಚೆಗೆ ಮೂಡಿಗೆರೆ ಭಾಗಕ್ಕೆ ಆಗಮಿಸಿತ್ತು.
ಈ ಆನೆಯು ಆಕ್ರಮಣಕಾರಿ ಪ್ರವೃತ್ತಿ ತೋರುತ್ತಿರುವುದರಿಂದ ಸೆರೆಹಿಡಿದು ಸಾಗಿಸಲು ತುರ್ತುಕ್ರಮ ವಹಿಸಲಾಗಿತ್ತು. ಕಳೆದ ನಾಲ್ಕೈದು ದಿನಗಳಿಂದ ಈ ಆನೆಯ ಚಲನ ವಲನಗಳನ್ನು ಗಮನಿಸಲಾಗುತ್ತಿತ್ತು. ಸೋಮವಾರ ಬೆಳಿಗ್ಗೆ ಈ ಆನೆಯು ಹಾಂದಿ ಶಾಲಿಮಾರ್ ಹಾಲ್ ಹಿಂಭಾಗದ ಕಾಫಿ ತೋಟದಲ್ಲಿ ಇರುವುದನ್ನು ಗಮನಿಸಿ ಕಾರ್ಯಾಚರಣೆ ಆರಂಭಿಸಲಾಗಿತ್ತು.

ಮಧ್ಯಾಹ್ನದ ಹೊತ್ತಿಗೆ ಸಾಕಾನೆಗಳ ಸಹಾಯದಿಂದ ಆನೆಯನ್ನು ಸೆರೆಹಿಡಿಯಲಾಯಿತು. ಈ ಆನೆಯು ಇನ್ನೂ ಚಿಕ್ಕ ವಯಸ್ಸಿನದ್ದಾಗಿದ್ದು, ತುಂಬಾ ಆಕ್ರಮಣಕಾರಿಯಾಗಿ ವರ್ತಿಸುತ್ತಿತ್ತು ಎನ್ನಲಾಗಿದೆ. ಹಾಗಾಗಿ ಮುಂದೆ ಈ ಆನೆಯವಲನಗಳನ್ನು ಗಮನಿಸಲು ರೆಡಿಯೋ ಕಾಲರ್ ಸಹ ಅಳವಡಿಸಲಾಯಿತು.
ಕಾರ್ಯಾಚರಣೆಯಲ್ಲಿ ಸಾಕಾನೆಗಳು, ಅರಣ್ಯ ಸಿಬ್ಬಂದಿ, ಆನೆ ಕಾರ್ಯಪಡೆ ಸಿಬ್ಬಂದಿ, ಅರಣ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಹಾಂದಿ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಇರುವ ಪ್ರದೇಶದಲ್ಲಿ ಸೆರೆಹಿಡಿದ ಆನೆಯನ್ನು ಲಾರಿಗೆ ಏರಿಸುವ ಕಾರ್ಯಾಚರಣೆ ನಡೆಸಿದ್ದರಿಂದ ಈ ಪ್ರದೇಶದಲ್ಲಿ ಜನಜಂಗುಳಿಯೇ ನೆರೆದಿತ್ತು. ಜನರನ್ನು ನಿಯಂತ್ರಿಸಲು ಅರಣ್ಯ ಮತ್ತು ಪೊಲೀಸ್ ಸಿಬ್ಬಂದಿ ಹರಸಾಹಸಪಟ್ಟರು.
ಈ ಆನೆ ಸೆರೆಹಿಡಿದಿದು ಬೇರೆಡೆ ಸಾಗಿಸಿದ್ದರಿಂದ ಮೂಡಿಗೆರೆ ಸುತ್ತಮುತ್ತಲ ಭಾಗದ ಜನರು ಸದ್ಯಕ್ಕೆ ನಿಟ್ಟುಸಿರು ಬಿಡವಂತಾಗಿದೆ.



