ಚಿಕ್ಕಮಗಳೂರು ಕೈಮರ ಬಳಿ ಪತ್ನಿಯನ್ನ ಕೊಂದು ನಾಪತ್ತೆಯಾಗಿದ್ದ ಪತಿಯನ್ನು ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅವಿನಾಶ್(32) ಬಂಧಿತ ಆರೋಪಿ. ಅವಿನಾಶ್, ಕೀರ್ತಿ(26)ಯನ್ನು 4 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ. ಬುಧವಾರ ಬೆಳಗ್ಗೆ ಇವರಿಬ್ಬರ ಮಧ್ಯೆ ಜಗಳ ಏರ್ಪಟ್ಟು, ಪತ್ನಿ ಕೀರ್ತಿಯನ್ನ ಅವಿನಾಶ್ ಚಾಕುವಿನಿಂದ ಹತ್ತಕ್ಕೂ ಹೆಚ್ಚು ಬಾರಿ ಇರಿದಿದ್ದ.
ದಂಪತಿಗೆ ಎರಡೂವರೆ ವರ್ಷದ ಹೆಣ್ಣು ಮಗುವಿದೆ. ಆದರೆ, ಅವಿನಾಶ್ ಆಕೆಗೆ ಡಿವೋರ್ಸ್ ನೀಡು ಎಂದು ಕಿರುಕುಳ ನೀಡುತ್ತಿದ್ದ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ.
ಮೃತ ಕೀರ್ತಿ 4 ತಿಂಗಳ ಗರ್ಭೀಯಾಗಿದ್ದು ಮನೆಯವರಿಗೆ ಗೊತ್ತಿಲ್ಲದಂತೆ ಅಬಾರ್ಷನ್ ಕೂಡ ಮಾಡಿಸಿದ್ದನಂತೆ. ಅಮ್ಮನ ಮನೆಯಲ್ಲಿದ್ದ ಕೀರ್ತಿ ಇಂದು ಬೆಳಗ್ಗೆ ಬಟ್ಟೆ ತೊಳೆದುಕೊಂಡು ಬರುತ್ತೇನೆ ಎಂದು ಹೋದಾಗ, ಆರೋಪಿ ಚಾಕು ಇರಿದಿದ್ದಾನೆ. ಕೂಡಲೇ ಆಕೆಯೇ ಆತನನ್ನ ತಳ್ಳಿ, ರಕ್ತದ ಮಡುವಿನಲ್ಲೇ ರಸ್ತೆಗೆ ಬಂದು ಕೂಗಾಡಿದಾಗ ಮನೆಯವರು, ಅಕ್ಕಪಕ್ಕದವರು ಆಕೆಯನ್ನ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೀರ್ತಿ ಸಾವನ್ನಪ್ಪಿದ್ದಾಳೆ. ಕೊಲೆಗೆ ಅವಿನಾಶ್ ಅಕ್ಕನೇ ಕಾರಣ ಎಂದು ಕೀರ್ತಿ ಪೋಷಕರು ಆರೋಪಿಸಿದ್ದಾರೆ.
ಪತ್ನಿಯ ಹತ್ಯೆ ಬಳಿಕ ಆರೋಪಿ ಅವಿನಾಶ್ ನಾಪತ್ತೆಯಾಗಿದ್ದ. ಕೀರ್ತಿಗೆ ಚಾಕುವಿನಿಂದ ಇರಿದ ಅವಿನಾಶ್, ಬಳಿಕ ಮುಳ್ಳಯ್ಯನಗಿರಿ ಕಾಡಿನಲ್ಲಿ ಅಡಗಿ ಕುಳಿತ್ತಿದ್ದ. ಆತನ ಬಂಧನಕ್ಕಾಗಿ ಚಿಕ್ಕಮಗಳೂರು ಎಸ್ಪಿ ವಿಕ್ರಂ ಆಮ್ಟೆ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಸಚಿನ್ ಹಾಗೂ ಸಬ್ ಇನ್ಸ್ಪೆಕ್ಟರ್, ರಾಜೇಶ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿದ್ದರು. ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರ ಯಶಸ್ವಿಯಾಗಿದ್ದಾರೆ.



