ಕನ್ನಡದ ಸುಪ್ರಸಿದ್ಧ ಕವಿ, ಗೀತರಚನೆಕಾರ, ಕಥೆಗಾರ, ನಾಟಕಕಾರ ಮತ್ತು ಸಂಭಾಷಣಕಾರ ಹೆಚ್.ಎಸ್. ವೆಂಕಟೇಶಮೂರ್ತಿ ಅವರು ಶುಕ್ರವಾರ ನಿಧನರಾಗಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಇದು ತುಂಬಲಾರದ ನಷ್ಟವಾಗಿದೆ. ಕನ್ನಡಕ್ಕೆ ಅನೇಕ ಕವಿತೆಗಳನ್ನು, ನಾಟಕಗಳನ್ನು , ಸಾಹಿತ್ಯಗಳನ್ನು ಕೊಡುಗೆ ನೀಡಿದ್ದಾರೆ. ಹೆಚ್ಎಸ್‌ವಿ ಯೆಂದೇ ಇವರು ಚಿರಪರಿಚಿತರಾಗಿದ್ದರು.
80 ವರ್ಷ ವಯಸ್ಸಿನ ಹೆಚ್‌ಎಸ್‌ವಿ ವಯೋಸಹಜ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮುಂಜಾನೆ ಮೃತಪಟ್ಟಿದ್ದಾರೆ. ಮೃತರಿಗೆ ನಾಲ್ವರು ಪುತ್ರರಿದ್ದಾರೆ.
1944ರ ಜೂನ್ 23ರಂದು ವೆಂಕಟೇಶಮೂರ್ತಿ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಹೊದಿಗೆರೆ ಎಂಬ ಹಳ್ಳಿಯಲ್ಲಿ ಜನಿಸಿದರು. ಅವರದ್ದು ಮಧ್ಯಮವರ್ಗದ ಕುಟುಂಬ. ಇವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಿಎ ಪದವಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂಎ ಪದವಿ ಪಡೆದರು. ‘ಕನ್ನಡದಲ್ಲಿ ಕಥನ ಕವನಗಳು’ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ ಪಡೆದರು. 1973ರಲ್ಲಿ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ನೇಮಕ ಆದರು. 2000ರಲ್ಲಿ ಅವರು ನಿವೃತ್ತಿ ಹೊಂದಿದರು. ಆ ಬಳಿಕವೂ ಬೆಂಗಳೂರನಲ್ಲೇ ನೆಲಿಸಿದ್ದ ಅವರು, ಬರಹ ಕೃಷಿಯಲ್ಲಿ ತೊಡಗಿಕೊಂಡಿದ್ದರು.
ವೆಂಕಟೇಶಮೂರ್ತಿ ಅವರಿಗೆ ಬಣ್ಣದ ಲೋಕದ ಮೇಲೆ ಒಲವು ಮೂಡಲು ಕಾರಣ ಆಗಿದ್ದು ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು. ಅವರು ಬಾಲ್ಯದಲ್ಲಿ ಇದ್ದಾಗ ಸಾಕಷ್ಟು ಕೃತಿಗಳನ್ನು ಅವರು ಓದುತ್ತಿದ್ದರು. ಅವರು ಕವಿಯಾಗಿ, ನಾಟಕಕಾರನಗಿಯೂ ಗುರುತಿಸಿಕೊಂಡಿದ್ದಾರೆ.
ಕನ್ನಡ ಅಧ್ಯಾಪಕರಾಗಿದ್ದ ನರಸಿಂಹ ಶಾಸ್ತ್ರಿಗಳು ವೆಂಕಟೇಶಮೂರ್ತಿ ಮೇಲೆ ಸಾಕಷ್ಟು ಪ್ರಭಾವ ಬೀರಿದರು. ತಮ್ಮ ಬಳಿಯಿದ್ದ ಕುವೆಂಪು, ಬೇಂದ್ರೆ, ಗೋರೂರು, ಮಾಸ್ತಿ, ಕಾರಂತ ಮೊದಲಾದವರ ಕೃತಿಗಳನ್ನು ಮೂರ್ತಿಯವರಿಗೆ ನೀಡಿದರು. ತಾವು ಬರೆದ ಮೊದಲ ಕವನ ಸಂಕಲನ ‘ಪರಿವೃತ್ತ’ವನ್ನು ವೆಂಕಟೇಶಮೂರ್ತಿ ಅವರು ನರಸಿಂಹ ಶಾಸ್ತ್ರಿಗಳಿಗೆ ಅರ್ಪಿಸಿದ್ದಾರೆ.
ಹೆಚ್.ಎಸ್.ವೆಂಕಟೇಶ್ ಮೂರ್ತಿಯವರು 100ಕ್ಕೂ ಹೆಚ್ಚು ಕನ್ನಡ ಕೃತಿಗಳನ್ನು ರಚಿಸಿದ್ದಾರೆ. ಅವರ ಪ್ರಮುಖ ಕವನ ಸಂಕಲನಗಳಲ್ಲಿ “ಪರಿವೃತ್ತ”, “ಬಾಗಿಲು ಬಡಿವ ಜನಗಳು”, “ಸೌಗಂಧಿಕ”, “ಮೂವತ್ತು ಮಳೆಗಾಲ” ಇತ್ಯಾದಿ ಸೇರಿವೆ. ಅವರು “ಹೆಜ್ಜೆಗಳು”, “ಒಂದು ಸೈನಿಕ ವೃತ್ತಾಂತ”, “ಅಗ್ನಿವರ್ಣ” ಮುಂತಾದ ನಾಟಕಗಳನ್ನು ರಚಿಸಿದ್ದಾರೆ.
ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ‘ಚಿನ್ನಾರಿ ಮುತ್ತ’ಗೆ ಇವರೇ ಕಥೆ, ಸಂಭಾಷಣೆ ಹಾಗೂ ಎಲ್ಲಾ ಹಾಡುಗಳನ್ನು ಬರೆದಿದ್ದರು. ‘ಅಮೆರಿಕ ಅಮೆರಿಕ’ ಚಿತ್ರದ ‘ಬಾನಲ್ಲಿ ಓಡೋ ಮೋಡ..’ ಹಾಡು ಇವರ ಬರಹದಲ್ಲೇ ಮೂಡಿ ಬಂದಿದೆ. ಪುನೀತ್ ನಟನೆಯ ‘ಮೈತ್ರಿ’ ಚಿತ್ರಕ್ಕೆ ಹಾಡು ಬರೆದಿದ್ದರು. ‘ಕಿರಿಕ್ ಪಾರ್ಟಿ’ ಚಿತ್ರದಲ್ಲಿ ಬಳಕೆ ಆದ ‘ತೂಗು ಮಂಚದಲ್ಲಿ ಕೂತು..’ ಇವರೇ ಬರೆದ ಹಾಡು.
ಮಕ್ಕಳು, ಯುವಕರು ಮತ್ತು ಮಹಿಳೆಯರಿಗೆ ಬೇಕಾದ ಗೀತೆಗಳನ್ನು ರಚಿಸಿ, ಕವಿಯಾಗಿ ಗುರುತಿಸಿಕೊಂಡಿದ್ದಾರೆ. ಇವರು 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ‘ಮುಕ್ತ’ ಧಾರಾವಾಹಿಯ ಟೈಟಲ್ ಸಾಂಗ್ ಸಾಕಷ್ಟು ಜನಪ್ರಿಯತೆ ಪಡೆದಿದೆ. ಇದನ್ನು ವೆಂಕಟೇಶಮೂರ್ತಿ ಅವರೇ ರಚಿಸಿದ್ದಾರೆ. ಸಾಹಿತ್ಯ ಲೋಕ ಹಾಗೂ ಚಿತ್ರ ಲೋಕಕ್ಕೆ ನೀಡಿದ ಕೊಡುಗೆಗಾಗಿ ಅನೇಕ ಪ್ರಶಸ್ತಿಗಳಿಗೂ ಅವರು ಭಾಜನರಾಗಿದ್ದಾರೆ.



