ರೈತರು ಸಾಗುವಳಿ ಮಾಡಿರುವ ಸರ್ಕಾರಿ ಭೂಮಿಯನ್ನು ಗುತ್ತಿಗೆ ಕಾಯ್ದೆಯಡಿ ಅರ್ಜಿ ಸಲ್ಲಿಸಲು ಇದ್ದ ಅವಧಿಯನ್ನು ವಿಸ್ತರಣೆ ಮಾಡಿದ್ದು, ರಾಜ್ಯ ಸರ್ಕಾರದ ಕ್ರಮವನ್ನು ಮೂಡಿಗೆರೆ ಬೆಳೆಗಾರರ ಸಂಘ ಸ್ವಾಗತಿಸಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ಅವರು ; ಗುತ್ತಿಗೆ ಆಧಾರದಲ್ಲಿ ಭೂಮಿ ಪಡೆಯಲು ಅರ್ಜಿ ಸಲ್ಲಿಸಲು 2025ರ ಜುಲೈ 15 ರವರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ. ಇದರಿಂದ ರೈತರಿಗೆ ಅನುಕೂಲ ಆಗಿದೆ. ಬೆಳೆಗಾರರ ಸಂಘಟನೆಗಳ ಮನವಿಗೆ ಸ್ಪಂದಿಸಿ ಅವಧಿ ವಿಸ್ತರಣೆ ಮಾಡಿದ ರಾಜ್ಯ ಸರ್ಕಾರದ ಕ್ರಮ ಸ್ವಾಗತಾರ್ಹ ಎಂದಿದ್ದಾರೆ.
ಅನೇಕ ಮಂದಿ ರೈತರು ಮಾಹಿತಿ ಕೊರತೆಯಿಂದ ನಿಗಧಿತ ಅವಧಿಯಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಬೆಳೆಗಾರರ ಸಂಘಟನೆಗಳು ಈ ಬಗ್ಗೆ ಹಲವು ಬಾರಿ ಸರ್ಕಾರಕ್ಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರುಗಳಿಗೆ ಮನವಿ ಸಲ್ಲಿಸಿತ್ತು. ಬೆಳೆಗಾರರ ಮನವಿಗೆ ಸ್ಪಂದಿಸಿ ಅವಧಿ ವಿಸ್ತರಣೆ ಮಾಡಿದ್ದು, ರೈತರು ಈ ಅವಕಾಶವನ್ನುಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಜೂನ್ 9 ರಂದು ಚಿಕ್ಕಮಗಳೂರಿನಲ್ಲಿ ನಡೆದ ಬೃಹತ್ ರೈತ ಸಮಾವೇಶದಲ್ಲಿಯೂ ಈ ಬೇಡಿಕೆ ಇಟ್ಟಿದ್ದೆವು. ಇದಲ್ಲದೇ ಇನ್ನೂ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದು ಈ ಎಲ್ಲಾ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಿಬೇಕು ಎಂದು ಮನವಿ ಮಾಡಿದ್ದಾರೆ.
ಮೂಡಿಗೆರೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮನೋಹರ್ ಮಾತನಾಡಿ ಪ್ಲಾಂಟೇಷನ್ ಜಮೀನು ಬಗರ್ ಹುಕುಂ ಅಡಿ ಮಂಜೂರಾತಿ ಮಾಡುವುದಿಲ್ಲ ಎಂದು ಸರ್ಕಾರದ ನಿಯಮ ರೂಪಿಸಿರುವುದರಿಂದ ಈಗಾಗಲೇ ಫಾರಂ ನಂ 57 ರಲ್ಲಿ ಅರ್ಜಿ ಸಲ್ಲಿಸಿರುವ ಜಮೀನು, ಫಾರಂ ನಂ 50 ಮತ್ತು 53ರಲ್ಲಿ ಮಂಜೂರಾಗಿ ವಜಾಗೊಂಡಿರುವ ಜಮೀನುಗಳಿಗೂ ರೈತರು ಲೀಸ್ ಅಡಿಯಲ್ಲಿ ಅರ್ಜಿ ಸಲ್ಲಿಸಲು ಸಲಹೆ ನೀಡಿದ್ದಾರೆ.
ರೈತ ಸಮಾವೇಶದಲ್ಲಿ ಭಾಗವಹಿಸಿ ರೈತರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ಯಶಸ್ವಿಗೊಳಿಸಿದ ವಿವಿಧ ಸಂಘಟನೆಗಳ ಮುಖಂಡರು, ಜನಪ್ರತಿನಿಧಿಗಳು, ಜಿಲ್ಲೆಯ ರೈತಾಪಿ ವರ್ಗದವರಿಗೆ ಮೂಡಿಗೆರೆ ಬೆಳೆಗಾರರ ಸಂಘದ ವತಿಯಿಂದ ಧನ್ಯವಾದ ಸಲ್ಲಿಸಿದ್ದಾರೆ.



