ಪೆಟ್ರೋಲ್ ಪೈಪ್ ಲೈನ್ ಕೊರೆದು ಪೆಟ್ರೋಲ್ ಕಳ್ಳತನ ಮಾಡಿರುವ ಘಟನೆ ನಡೆದಿದೆ. ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಠಾಣಾ ವ್ಯಾಪ್ತಿಯ ಹಿರೇಶಿಗರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮಂಗಳೂರಿನಿಂದ ಬೆಂಗಳೂರಿಗೆ ಪೆಟ್ರೋಲ್ ಸಾಗಿಸುವ ಪೈಪ್ ಲೈನ್ ಗೆ ಕನ್ನ ಕೊರೆದು ಪೆಟ್ರೋಲ್ ಕಳ್ಳತನ ಮಾಡಲಾಗಿದೆ. ಸುಮಾರು 2 ಸಾವಿರ ಲೀಟರ್ ಪೆಟ್ರೋಲ್ ಕಳ್ಳತನ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ.
ಮೂಡಿಗೆರೆ ತಾಲೂಕಿನ ಹಿರೇಶಿಗರ ಗ್ರಾಮದ ಬಳಿ ಕೃತ್ಯಕ್ಕೆ ಬಳಸಿದ್ದ ಲಾರಿ ಪತ್ತೆಯಾಗಿದೆ. ಕಳ್ಳತನದ ಲಾರಿಗೆ ನಂಬರ್ ಪ್ಲೇಟ್ ಕೂಡ ಇಲ್ಲ ಎಂದು ತಿಳಿದುಬಂದಿದೆ. ಕೃತ್ಯಕ್ಕೆ ಬಳಸಿರುವ ಲಾರಿ ಮತ್ತು ಪರಿಕರಗಳನ್ನು ಗೋಣಿಬೀಡು ಪೊಲೀಸರು ವಶಕ್ಕೆ ಪಡೆದಿಕೊಂಡಿದ್ದಾರೆ.
ಪ್ರಕರಣ ಬೆಳಕಿಗೆ ಬರುತ್ತಲೇ ಆರೋಪಿಗಳು ಲಾರಿ ಬಿಟ್ಟು ಪರಾರಿಯಾಗಿದ್ದಾರೆ. ಕಳ್ಳತನದಲ್ಲಿ ಸ್ಥಳೀಯ ವ್ಯಕ್ತಿಗಳೇ ಪಾಲ್ಗೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಸ್.ಐ. ಹರ್ಷವರ್ಧನ್ ಅವರ ನೇತೃತ್ವದಲ್ಲಿ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಪೈಪ್ ಲೈನ್ ಎಲ್ಲಿ ಕೊರೆದಿದ್ದಾರೆ ಎಂಬುದು ಇನ್ನೂ ಪತ್ತೆಯಾಗಿಲ್ಲ. ಕಂಪನಿಯ ಸಿಬ್ಬಂದಿಗಳು ಗಸ್ತು ತಿರುಗುತ್ತಿದ್ದರೂ ಸಹ ಪೆಟ್ರೋಲ್ ಕಳ್ಳತನ ಆಗಿರುವುದು ಹಲವು ಅನುಮಾನಗಳಿಗೆ ಅನುವು ಮಾಡಿಕೊಟ್ಟಿದೆ.
ಈ ಹಿಂದೆಯೂ ಹಲವು ಬಾರಿ ಪೆಟ್ರೋಲ್ ಕಳ್ಳತನ ಪ್ರಕರಣಗಳು ನಡೆದಿದ್ದವು. ಹುರುಡಿ, ಗೌಡಹಳ್ಳಿ, ಅರೆಹಳ್ಳಿ ಬಳಿ ಪೈಪ್ ಲೈನ್ ಕೊರೆದು ಕಳ್ಳತನ ಮಾಡಿದ್ದ ಪ್ರಕರಣ ನಡೆದಿದ್ದವು.
ಇದೀಗ ಮತ್ತೊಮ್ಮೆ ಅಂತಹ ಪ್ರಕರಣ ನಡೆದಿದೆ. ಇಂತಹ ಪ್ರಕರಣದಲ್ಲಿ ಪೆಟ್ರೋಲ್ ಗೆ ಬೆಂಕಿ ಹತ್ತಿದರೆ ಇಡೀ ಪ್ರದೇಶವೇ ಹೊತ್ತಿ ಉರಿಯುವ ಅಪಾಯವಿರುತ್ತದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.



