kgf

ಬ್ಯಾಂಕ್ ಗಳು ಆಸ್ತಿ ಹರಾಜು ಹಾಕುತ್ತಿರುವುದನ್ನು ತಡೆಯಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

 

 

ಸ್ವಾಭಿಮಾನಿ ರೈತ ಬೆಳೆಗಾರರ ಫಲವತ್ತಾದ ಭೂಮಿಯನ್ನು ಸರ್ಫೇಸಿ ಕಾಯ್ದೆ ಅಡಿ ಕೆಲವು ಬ್ಯಾಂಕ್ ಅಧಿಕಾರಿಗಳು ದುರುದ್ದೇಶದಿಂದ ಇ-ಹರಾಜು ಮಾಡುವುದನ್ನು ನಿಲ್ಲಿಸದಿದ್ದರೆ ಈ ಪಿಡುಗಿನ ವಿರುದ್ಧ ಬ್ಯಾಂಕ್‌ಗಳ ಮುಂದೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದೆಂದು ಕರ್ನಾಟಕ ಬೆಳೆಗಾರರ ಒಕ್ಕೂಟ ಎಚ್ಚರಿಸಿದೆ.

ಚಿಕ್ಕಮಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕೆಜಿಎಫ್ ಅಧ್ಯಕ್ಷ ಹೆಚ್.ಬಿ. ಶಿವಣ್ಣ, ಬೆಳೆಗಾರರ ಸಾಲ ತೀರುವಳಿ ಆದ ನಂತರವೂ ಕೆನರಾ ಬ್ಯಾಂಕ್ ಮೂಡಿಗೆರೆ ಶಾಖೆಯ ಮೂಲ ದಾಖಲೆಗಳನ್ನು ಬೆಳೆಗಾರರಿಗೆ ಹಿಂದಿರುಗಿಸದೇ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದರು.

ಕಳೆದ ಮೂರು ವರ್ಷಗಳಿಂದ ಕಾಫಿ ಬೆಳೆಗಾರರ ಸಾಲ ವಸೂಲಾತಿಗಾಗಿ ಸರ್ಫೇಸಿ ಕಾಯ್ದೆ ಅಡಿಯಲ್ಲಿ ಬ್ಯಾಂಕ್‌ಗಳು ಇ-ಹರಾಜು ಮಾಡಲು ಮುಂದಾಗಿರುವ ಬಗ್ಗೆ ಪ್ರತಿರೋಧಿಸಿದ್ದು, ಇಂದೂ ಸಹ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.

ವಿವಿಧ ಬ್ಯಾಂಕುಗಳಲ್ಲಿ ರೈತರು  ತೋಟದ ನಿರ್ವಹಣೆಗಾಗಿ ಸಾಲ ಪಡೆದುಕೊಂಡಿದ್ದು, ಹಲವಾರು ಕಾರಣಗಳಿಂದ ಸಾಲ ಮರುಪಾವತಿ ಮಾಡುವುದು ವಿಳಂಭವಾಗಿದ್ದು, ಇದನ್ನು ನೆಪವಾಗಿಟ್ಟುಕೊಂಡು ಬ್ಯಾಂಕ್ ಗಳು ಸರ್ಫೇಸಿ ಕಾಯ್ದೆಯಡಿ ಆಸ್ತಿಗಳನ್ನು ಆನ್ ಲೈನ್ ಮೂಲಕ ಹರಾಜು ಹಾಕುತ್ತಿವೆ. ಮೂಡಿಗೆರೆ ಕೆನರಾ ಬ್ಯಾಂಕ್‌ನಲ್ಲಿ ಸಾಲ ಮಾಡಿದ್ದ ಸ್ಥಳೀಯ ರೈತರೊಬ್ಬರು ಬ್ಯಾಂಕ್ ಸೂಚನೆಯಂತೆ ಸುಮಾರು 43 ಲಕ್ಷ ರೂಪಾಯಿಗಳನ್ನು ಜನವರಿ ತಿಂಗಳಿನಲ್ಲಿ ಮರುಪಾವತಿ ಮಾಡಿದ್ದರೂ ಇದೂವರೆಗೂ ಈ ಬೆಳೆಗಾರರಿಗೆ ಸಾಲದ ಭದ್ರತೆಗಾಗಿ ನೀಡಿದ್ದ ತೋಟದ ಮೂಲ ದಾಖಲೆಗಳನ್ನು ಹಿಂದುರಿಗಿಸದೇ ಬ್ಯಾಂಕ್ ಅಧಿಕಾರಿಗಳು ಅನುಚಿತ ವರ್ತನೆ ತೋರಿದ್ದಾರೆಂದು ದೂರಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಬೆಳೆಗಾರರ ಸಂಘಟನೆಗಳು, ಜನಪ್ರತಿನಿಧಿಗಳು ಹಾಗೂ ಎಲ್ಲಾ ಬ್ಯಾಂಕ್‌ಗಳ ಹಿರಿಯ ಅಧಿಕಾರಿಗಳ ಸಭೆಯನ್ನು ಕರೆಯಲಾಗಿತ್ತು, ಈ ಸಭೆಯಲ್ಲಿ ಸಂಸದರು ಸರ್ಫೇಸಿ ಕಾಯ್ದೆ ಅಡಿಯಲ್ಲಿ ರೈತ ಬೆಳೆಗಾರರ ಭೂಮಿಯನ್ನು ಹರಾಜು ಹಾಕುವುದನ್ನು ಸುಮಾರು ಆರು ತಿಂಗಳ ಕಾಲ ತಡೆ ಹಿಡಿಯುವಂತೆ ಹಾಗೂ ಬೆಳೆಗಾರರಿಗೆ ಬ್ಯಾಂಕ್‌ಗಳು ಓಟಿಎಸ್ ಮೂಲಕ ಸೌಹಾರ್ದಯುತವಾಗಿ ತಮ್ಮ ಸಾಲ ತೀರುವಳಿಯನ್ನು ಮಾಡಲು ಅವಕಾಶ ಕಲ್ಪಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು ಎಂದು ಹೇಳಿದರು.

ಬೆಂಗಳೂರಿನ ಕಾಫಿ ಮಂಡಳಿಯಲ್ಲಿ ಅಧ್ಯಕ್ಷ ಎಂ.ಜೆ. ದಿನೇಶ್ ಅವರ ನೇತೃತ್ವದಲ್ಲಿ ರಾಜ್ಯಮಟ್ಟದ ಬ್ಯಾಂಕರ್‌ಗಳ ಸಭೆಯನ್ನು ಕರೆಯಲಾಗಿದ್ದು, ಅಲ್ಲಿಯೂ ಕೂಡ ಬೆಳೆಗಾರರ ತೋಟಗಳನ್ನು ಇ-ಹರಾಜು ಮಾಡುವುದನ್ನು ಬಿಟ್ಟು ಬ್ಯಾಂಕ್ ಹಾಗೂ ಬೆಳೆಗಾರರು ಪರಸ್ಪರ ಮಾತುಕತೆ ಮೂಲಕ ಋಣಮುಕ್ತರಾಗಲು ಅವಕಾಶ ಕಲ್ಪಿಸಿಕೊಡುವುದಾಗಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿತ್ತು ಎಂದು ಮಾಹಿತಿ ನೀಡಿದರು.

ಇತ್ತೀಚಿನ ಬೆಳವಣಿಗೆಗಳಲ್ಲಿ ಕೆಲವು ಬ್ಯಾಂಕ್ ಹಿರಿಯ ಅಧಿಕಾರಿಗಳು ಸುಸ್ತಿದಾರರಾಗಿರುವ ಬೆಳೆಗಾರರ ಸಾಲವನ್ನು ಮಾತುಕತೆಗಳ ಮೂಲಕ ತೀರ್ಮಾನ ಮಾಡುವುದನ್ನು ಪರಿಗಣಿಸದೇ ಕೆಲವು ರಿಯಲ್ ಎಸ್ಟೇಟ್ ಬಂಡವಾಳ ಶಾಹಿಗಳ ಕೈಗೊಂಬೆಯಂತೆ ವರ್ತಿಸಿದ್ದಾರೆಂದು ಟೀಕಿಸಿದರು.

ಈ ಘಟನೆಗಳನ್ನು ಸದ್ಯದಲ್ಲೇ ನಿಯಂತ್ರಿಸದಿದ್ದಲ್ಲಿ ರೈತ ಬೆಳೆಗಾರರು ಜೀವನಾಧಾರವಾಗಿರುವ ತಮ್ಮ ಅಮೂಲ್ಯವಾದ ಭೂಮಿಯನ್ನು ರಿಯಲ್ ಎಸ್ಟೇಟ್ ಉದ್ದಿಮೆದಾರರಿಗೆ ಅನಿವಾರ್ಯವಾಗಿ ಒಪ್ಪಿಸಬೇಕಾಗಿರುತ್ತದೆ. ಇದಕ್ಕೆ ದುರಾಲೋಚನೆ ಮನಸ್ಥಿತಿಯ ಬ್ಯಾಂಕ್ ಅಧಿಕಾರಿಗಳು ಕಾರಣ ಎಂದು ಲೇವಡಿ ಮಾಡಿದರು.

ಈ ಕೂಡಲೇ ಡಿಎಲ್‌ಬಿಸಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಕಟ್ಟುನಿಟ್ಟಾದ ಸೂಚನೆಗಳನ್ನು ನೀಡಿ ಬೆಳೆಗಾರರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ, ಕಾರ್ಯದರ್ಶಿ ಮನೋಹರ್, ಮುಖಂಡರಾದ ಬಿ.ಎಸ್. ಜಯರಾಂ, ಸುರೇಶ್ ಗೌಡ, ಅಶೋಕ್ ಕುಮಾರ್, ಹಾಲಪ್ಪಗೌಡ, ರತೀಶ್ ಕುಮಾರ್, ಸುರೇಂದ್ರ, ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ