kandaya copy

 

 

ಪ್ಲಾಂಟೇಶನ್ ಭೂಮಿಯನ್ನು ಗುತ್ತಿಗೆಗೆ ನೀಡುವ ಯೋಜನೆಗೆ ಅರ್ಜಿ ಸಲ್ಲಿಸಲು ಮತ್ತಷ್ಟು ಕಾಲಾವಕಾಶ ನೀಡಲಾಗಿದ್ದು, ಜಂಟಿ ಸರ್ವೇ ಪೂರ್ಣಗೊಂಡು ಅರಣ್ಯ ಮತ್ತು ಕಂದಾಯ ಭೂಮಿಯ ನಿಖರ ಮಾಹಿತಿ ಲಭ್ಯವಾದ ಬಳಿಕ ಅರ್ಜಿ ವಿಲೇವಾರಿ ಪ್ರಕ್ರಿಯೆಯನ್ನು ಅಭಿಯಾನದ ಮಾದರಿಯಲ್ಲಿ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲೆಯ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಬಹಳ ದಿನಗಳಿಂದ ಜಂಟಿ ಸರ್ವೇ ಆಗದೆ ಬಾಕಿ ಉಳಿದಿದೆ. ಇದೀಗ ಜಂಟಿ ಸರ್ವೇ ಕೈಗೊಳ್ಳಲು ಅರಣ್ಯ ಇಲಾಖೆಯೊಂದಿಗೆ ಸೇರಿ ನಿಯಮಾವಳಿಗಳನ್ನು ರೂಪಿಸಲಾಗಿದೆ ಎಂದರು. ಸುತ್ತೋಲೆಗಳನ್ನು ಹೊರಡಿಸಿ, ಹಿಂದಿನಿಂದಲೂ ಉಳಿದಿದ್ದ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಜಂಟಿ ಸರ್ವೇಯನ್ನು ಕಾರ್ಯ ರೂಪಕ್ಕೆ ತಂದಿರುವುದಾಗಿ ತಿಳಿಸಿದರು.

ಜಂಟಿ ಸರ್ವೇ ಆಗದೆ ಅರ್ಜಿ ವಿಲೇವಾರಿ ಮಾಡಲು ಸಾಧ್ಯವಿಲ್ಲ. ಅರಣ್ಯ ಮತ್ತು ಕಂದಾಯ ಜಮೀನಿನ ನಿಖರತೆ ತಿಳಿಯದಿದ್ದಲ್ಲಿ ಅರ್ಜಿ ವಿಲೇವಾರಿ ಪ್ರಕ್ರಿಯೆ ಸಾಧ್ಯವಾಗದು. ಹಿಂದೆ ಆಗಿರುವಂತೆ ಕಂದಾಯ ಜಮೀನೆಂದು ಅರಣ್ಯ ಭೂಮಿಯನ್ನು ಮಂಜೂರು ಮಾಡಿರುವ ತಪ್ಪುಗಳು ಪುನರಾವರ್ತನೆಯಾಗಬಹುದು. ಹೀಗಾಗಿ ಜಂಟಿ ಸರ್ವೇ ಪೂರ್ಣಗೊಂಡ ಬಳಿಕವಷ್ಟೇ ಪ್ಲಾಂಟೇಶನ್ ಭೂಮಿ ಗುತ್ತಿಗೆಗೆ ನೀಡುವ ಕುರಿತ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಹಿಂದೆ ಭೂಮಿ ಮಂಜೂರಾದ ಪ್ರಕರಣಗಳಲ್ಲಿ ಕಾಲ ಕಾಲಕ್ಕೆ ದಾಖಲಾತಿಗಳನ್ನು ನೀಡುವ ಕಾರ್ಯ ನಡೆದಿದ್ದಲ್ಲಿ ಇಷ್ಟೊಂದು ಸಮಸ್ಯೆಯಾಗುತ್ತಿರಲಿಲ್ಲ ಎಂದರು. ಪೌತಿ ಖಾತೆ ಬದಲಾವಣೆ ಮಾಡುವ ಪ್ರಕ್ರಿಯೆ ಹಿಂದಿನಿಂದಲೂ ಕಾಲ ಕಾಲಕ್ಕೆ ಆಗಬೇಕಿತ್ತು. ಅದು ಬಾಕಿ ಉಳಿದಿವೆ. ಅವುಗಳ ಖಾತೆಯನ್ನೂ ನಾವು ಬದಲಾವಣೆ ಮಾಡಬೇಕಾಗಿದೆ. ಇನ್ನೂ ಸಾಕಷ್ಟು ಪ್ರಕರಣಗಳು ನಮ್ಮ ಮುಂದಿವೆ ಎಂದು ತಿಳಿಸಿದರು.

ನಮ್ಮ ಸಿಬ್ಬಂದಿಗೆ ಕೆಲಸದ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಇ-ಆಫೀಸ್ ವ್ಯವಸ್ಥೆಯನ್ನು ತಾಲ್ಲೂಕು ಕಚೇರಿ ಹಾಗೂ ನಾಡ ಕಚೇರಿವರೆಗೂ ವಿಸ್ತರಿಸಿದ್ದೇವೆ. ಗ್ರಾಮ ಲೆಕ್ಕಿಗರಿಗೆ ಲ್ಯಾಪ್‌ಟಾಪ್ ಒದಗಿಸಲಾಗಿದ್ದು, ಅವರು ಕ್ಷೇತ್ರದಲ್ಲಿ ಕಾರ್ಯನಿರತರಾಗಿದ್ದಾಗಲೇ ನೇರವಾಗಿ ಅಲ್ಲಿಂದಲೇ ಅಪ್‌ಲೋಡ್ ಮಾಡುವಂತಾದರೆ ಅವರಿಗೂ ಕೆಲಸದ ಒತ್ತಡ ಕಡಿಮೆಯಾಗಲಿದೆ ಎಂದರು.

ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿ ಎರಡನೇ ಹಂತಕ್ಕೆ ಅಗತ್ಯ ಅನುದಾನ ಮಂಜೂರಾದಲ್ಲಿ ಈ ಜಿಲ್ಲೆಯ ಬಹುದಿನಗಳ ನಿರೀಕ್ಷೆ ಈಡೇರಲಿದೆ. ಜಿಲ್ಲೆಯಲ್ಲಿ ಹೊಸ ತಾಲ್ಲೂಕುಗಳ ರಚನೆಗೆ ಪೂರಕವಾಗಿ ಕಳಸ ಹಾಗೂ ಅಜ್ಜಂಪುರಕ್ಕೆ ತಾಲ್ಲೂಕು ಆಡಳಿತ ಕಚೇರಿಯನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.

ಹಿಂದೆ 10, 30, 40, 50 ವರ್ಷಗಳಿಂದ ಮಂಜೂರಾಗಿರುವ ಭೂಮಿಗಳಿಗೆ ಇಂದಿಗೂ ಪೋಡಿ ಮಾಡಿಕೊಡದೇ ಇರುವುದರಿಂದ ಆ ಜನರು ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಹಿಂದೆ ಜಮೀನು ಮಂಜೂರು ಮಾಡುವತ್ತ ಮಾತ್ರ ಗಮನ ಹರಿಸಲಾಗಿತ್ತು. ಅಂದೇ ಪೋಡಿಗಳನ್ನು ದುರಸ್ತಿಪಡಿಸಿ ದಾಖಲಾತಿಗಳನ್ನು ಒದಗಿಸಿದ್ದರೆ ಇಂದು ಇಷ್ಟೊಂದು ಕಡತಗಳು ಕಳೆದುಹೋಗಿವೆ ಎನ್ನುವ ಸಮಸ್ಯೆಗಳು ಎದುರಾಗುತ್ತಿರಲಿಲ್ಲ ಎಂದರು.

ಹಿಂದೆ ಅರ್ಜಿ ಕೊಟ್ಟ ಶಕ್ತರು ಮಾತ್ರ ಪ್ರಯೋಜನ ಪಡೆದುಕೊಳ್ಳುತ್ತಿದ್ದರು. ಇದೀಗ ನಾವೇ ರೈತರ ಮನೆ ಬಾಗಿಲಿಗೆ ಹೋಗಿ ಪೋಡಿ ಮಾಡಿಕೊಡುವ ಪ್ರಕ್ರಿಯೆಯನ್ನು ಆರಂಭಿಸಿದ್ದೇವೆ. ಏಳೆಂಟು ತಿಂಗಳಲ್ಲಿ ರೈತರಿಗೆ ಮಂಜೂರಾದ 82 ಸಾವಿರ ಜಮೀನುಗಳನ್ನು ಅಳತೆ ಮಾಡಲಾಗಿದೆ ಎಂದು ಹೇಳಿದರು.

ಮಲೆನಾಡ ಪ್ರದೇಶಗಳಲ್ಲಿ ಹೆಚ್ಚು ಮಳೆ ಬೀಳುವ ಸಂದರ್ಭದಲ್ಲಿ ಗುಡ್ಡದ ಮೇಲೆ ಹಾಗೂ ಗುಡ್ಡದ ಕೆಳಗೆ ವಾಸಿಸುವ ಜನರನ್ನು ಮುಂಚಿತವಾಗಿ ಬೇರೆಡೆಗೆ ವಾಸಿಸಲು ವ್ಯವಸ್ಥೆ ಮಾಡಬೇಕು. ಸಮಸ್ಯೆಯಾಗುವ ಮೊದಲೇ ಪ್ರಾಣಹಾನಿಯಾಗುವುದನ್ನು ತಡಗಟ್ಟಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಮಲೆನಾಡು ಹಾಗೂ ಕರಾವಳಿ ಪ್ರದೇಶಗಳ ಗುಡ್ಡ ಕುಸಿತವನ್ನು ತಡೆಯಲು 400 ಕೋಟಿ ರೂ. ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಅನುದಾನ ಬಂದ ತಕ್ಷಣ ಹಣ ಬಿಡುಗಡೆ ಮಾಡಲಾಗುವುದು. ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಶಾಸಕ ಹಾಗೂ ಕ್ರೆಡಿಲ್ ಅಧ್ಯಕ್ಷ ಟಿ.ಡಿ.ರಾಜೇಗೌಡ, ಶಾಸಕರಾದ ಜಿ.ಹೆಚ್.ಶ್ರೀನಿವಾಸ್, ಕೆ.ಎಸ್.ಆನಂದ್, ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್., ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು ಇತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ