ಚಿಕ್ಕಮಗಳೂರು ನಗರದ ರಾಮನಹಳ್ಳಿ ಬಡಾವಣೆಯಲ್ಲಿ ಸಾರ್ವಜನಿಕ ಉದ್ಯಾನವನದ ಜಾಗವನ್ನು ಅತಿಕ್ರಮಿಸಿರುವುದನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಬಡಾವಣೆ ನಿವಾಸಿಗಳು ನಮ್ಮ ಕರವೇ ನೇತೃತ್ವದಲ್ಲಿ ನಗರಸಭೆ ಅಧ್ಯಕ್ಷ ಬಿ.ಶೀಲಾ ದಿನೇಶ್ ಅವರಿಗೆ ಸೋಮವಾರ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಕುರಿತು ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಅಗ್ನಿ ಸುಮಂತ್ ಬಡಾವಣೆಯಲ್ಲಿ 1600 ಚದರ ಅಡಿ ಉದ್ಯಾನವನಕ್ಕಾಗಿ ಈ ಹಿಂದೆಯೇ ಜಾಗವನ್ನು ಕಾಯ್ದಿರಿಸಿ ನಕ್ಷೆ ಅನುಮೋದನೆಯಾಗಿತ್ತು. ಆದರೆ ಕೆಲವು ಬಲಾಡ್ಯ ವ್ಯಕ್ತಿಗಳು ಪಾರ್ಕ್ ಜಾಗವನ್ನು ಕಬಳಿಸಲು ಯತ್ನಿಸುತ್ತಿದ್ದು ಈ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ಪ್ರಸ್ತುತ ಉದ್ಯಾನವನ ಜಾಗವನ್ನು ನಿವೇಶನಗಳನ್ನಾಗಿ ಮಾಡಿಕೊಂಡು ರಾಮನಹಳ್ಳಿ ನಾಗರೀಕರಿಗೆ ಮೋಸ ಮಾಡಿ ಅಧಿಕ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ.
ಆದ್ದರಿಂದ ನಗರಸಭಾ ಆಡಳಿತವು ಪಾರ್ಕ್ ಅತಿ-ಕ್ರಮದಾರರ ವಿರುದ್ಧ ಕಾನೂನು ಕ್ರಮ ಜರುಗಿಸಿ ಜಾಗವನ್ನು ಉಳಿಸಿಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾರ್ಗವ್, ಉಪಾಧ್ಯಕ್ಷ ಶಂಕರ್‌ಶೆಟ್ಟಿ, ನಿವಾಸಿಗಳಾದ ಗೌತಮ್, ತೇಜಸ್, ಪ್ರದೀಪ್, ನಂದನ್, ಕಿರಣ್ ಮತ್ತಿತರರು ಹಾಜರಿದ್ದರು.



