rasthe new 2

 

 

ಮೂಡಿಗೆರೆ ಸಕಲೇಶಪುರ ತಾಲ್ಲೂಕುಗಳ ಗಡಿಭಾಗದಲ್ಲಿರುವ ಜಪಾವತಿ ದೇವರುಂದ ರಸ್ತೆ ಅತಿವೃಷ್ಟಿಯಿಂದ ಛಿದ್ರವಾಗಿದ್ದು, ವಾಹನ ಸವಾರರಿಗೆ ನರಕದರ್ಶನ ಮಾಡುತ್ತಿದೆ.

ಸಕಲೇಶಪುರ ಗಡಿಭಾಗದ ಜಪಾವತಿ ಸೇತುವೆಯಿಂದ ಆರಂಭವಾಗಿ ಮೂಡಿಗೆರೆ ತಾಲ್ಲೂಕಿನ ದೇವರುಂದ ದೇವಸ್ಥಾನದವರೆಗೆ ಸುಮಾರು ಎರಡೂವರೆ ಕಿಲೋಮೀಟರ್ ರಸ್ತೆ ಸಂಪೂರ್ಣ ಛಿದ್ರವಾಗಿದೆ. ಮಂಡಿ ಆಳದ ಗುಂಡಿಗಳು ಬಿದ್ದಿದ್ದು ವಾಹನ ಚಲಾಯಿಸುವುದೇ ದುಸ್ತರವಾಗಿದೆ. ಈ ಭಾಗದಲ್ಲಿ ನಿತ್ಯ ಸಂಚಾರ ಮಾಡುವ ವಾಹನ ಸವಾರರು, ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಈ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದ್ದರೂ ಸಹ ಸಕಲೇಶಪುರ ಮತ್ತು ಮೂಡಿಗೆರೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಡುವಿನ ಜಟಾಪಟಿಯಿಂದಾಗಿ ಈ ರಸ್ತೆಗೆ ಅಭಿವೃದ್ಧಿಗೆ ಅಡ್ಡಗಲಾಗುತ್ತಿದೆ.

ಈ ರಸ್ತೆ ಇರುವುದು ಮೂಡಿಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ. ಆದರೆ ಹಿಂದಿನಿಂದಲೂ ಇದರ ನಿರ್ವಹಣೆ ಸಕಲೇಶಪುರ ಲೋಕೋಪಯೋಗಿ ಇಲಾಖೆಯ ಅಡಿಯಲ್ಲಿ ಸೇರ್ಪಡೆಯಾಗಿದೆ. ಇದೀಗ ಮೂಡಿಗೆರೆ ಲೋಕೋಪಯೋಗಿ ಇಲಾಖೆಗೆ ಈ ರಸ್ತೆ ಅಭಿವೃದ್ದಿಗೆ 4 ಕೋಟಿ ಹಣ ಬಿಡುಗಡೆಯಾಗಿದೆ. ಆದರೆ ರಸ್ತೆಯನ್ನು ಸಕಲೇಶಪುರ ಲೋಕೋಪಯೋಗಿ ವ್ಯಾಪ್ತಿಯಿಂದ ಮೂಡಿಗೆರೆ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸದೇ ಕಾಮಗಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಇತ್ತ ಸಕಲೇಶಪುರ ಲೋಕೋಪಯೋಗಿ ಇಲಾಖೆಯವರು ಇದು ನಮ್ಮ ವ್ಯಾಪ್ತಿಗೆ ಬರುತ್ತದೆ. ಅಭಿವೃದ್ಧಿ ನಮ್ಮ ಸುಪರ್ದಿಯಲ್ಲೇ ಅಭಿವೃದ್ಧಿ ಮಾಡುತ್ತೇವೆ ನಮಗೆ ಅನುದಾನ ಹಸ್ತಾಂತರಿ ಎಂದು ವಾದ ಮಾಡುತ್ತಿದೆ.  ಇವರುಗಳ ಪ್ರತಿಷ್ಠೆಯಿಂದ ಈ ರಸ್ತೆ ಸಂಪೂರ್ಣ ಹದಗೆಟ್ಟುಹೋಗಿದೆ.

ಇಷ್ಟು ವರ್ಷಗಳ ಕಾಲ ಇದು ಸಕಲೇಶಪುರ ಲೋಕೋಪಯೋಗಿ ಸುಪರ್ದಿಯಲ್ಲಿದ್ದರೂ ಈ ರಸ್ತೆಯ ಅಭಿವೃದ್ಧಿ ಬಗ್ಗೆ ಸಕಲೇಶಪುರ ಶಾಸಕರಾಗಲಿ, ಅಧಿಕಾರಿಗಳಾಗಲಿ ಕ್ರಮ ವಹಿಸಿಲ್ಲ. ಸುಮಾರು ವರ್ಷಗಳಿಂದ ಈ ರಸ್ತೆ ಅಭಿವೃದ್ಧಿಯಾಗದೇ ಉಳಿದಿದೆ. ಇದೀಗ ಮೂಡಿಗೆರೆ ಶಾಸಕರು ಅಭಿವೃದ್ಧಿಗೆ ಅನುದಾನ ನೀಡಿದ್ದರೂ ಸಹ ಕಾಮಗಾರಿಗೆ ಅಡ್ಡಗಾಲು ಹಾಕಲಾಗುತ್ತಿದೆ.

ಈ ರಸ್ತೆಯು ಸಕಲೇಶಪುರ ಹಾನುಬಾಳು, ದೇವಾಲಕೆರೆ ಕಡೆಯಿಂದ ದೇವರುಂದ, ಗೌಡಹಳ್ಳಿ, ಊರುಬಗೆ, ಎತ್ತಿನ ಭುಜ, ಬೆಟ್ಟದಬೈರವೇಶ್ವರ ಭಾಗಕ್ಕೆ ಜನರು ಮತ್ತು ಪ್ರವಾಸಿಗರು ಸಂಚರಿಸುವ ಪ್ರಮುಖ ರಸ್ತೆಯಾಗಿದೆ.  ನಿತ್ಯ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ.

ಎರಡು ಕ್ಷೇತ್ರಗಳ ನಡುವೆ ಸಿಲುಕಿರುವ ಈ ರಸ್ತೆವ ಅವಸ್ಥೆ ತ್ರಿಶಂಕು ಸ್ಥಿತಿಗೆ ತಲುಪಿದೆ.  ಈ ಬಗ್ಗೆ ಮೂಡಿಗೆರೆ ಹಾಗೂ ಸಕಲೇಶಪುರ ಕ್ಷೇತ್ರಗಳ ಶಾಸಕರು ಮತ್ತು ಅಧಿಕಾರಿಗಳು ಮಾತುಕತೆ ಮೂಲಕ ಗೊಂದಲ ಇತ್ಯರ್ಥಪಡಿಸಿ ಆದಷ್ಟು ಬೇಗ ರಸ್ತೆ ಅಭಿವೃದ್ಧಿಗೆ ಕ್ರಮ ವಹಿಸಬೇಕಾಗಿದೆ. ಇಲ್ಲದೇ ಇದ್ದರೆ ಈ ಭಾಗದ ಜನರು ಪ್ರತಿಭಟನೆಯ ಹಾದಿ ಹಿಡಿಯಲು ಮುಂದಾಗಿದ್ದಾರೆ.

ಜಪಾವತಿ ದೇವರುಂದ ರಸ್ತೆ ಅಭಿವೃದ್ಧಿಗೆ  ಅನುದಾನ ಕೋರಲಾಗಿದೆ. ಜಪಾವತಿ ಸೇತುವೆ ನಿರ್ಮಾಣಕ್ಕೂ ಕಾವೇರಿ ನಿರಾವರಿ ನಿಗಮದಿಂದ 5 ಕೋಟಿ ಅನುದಾನ ನೀಡಲಾಗಿದೆ. ಈ ರಸ್ತೆ ಸಕಲೇಶಪುರ ಲೋಕೋಪಯೋಗಿ ವ್ಯಾಪ್ತಿಗೆ ಸೇರಿದ್ದು ಹಿಂದಿನಿಂದಲೂ ಅಭಿವೃದ್ಧಿ ಕಾಣದೇ ಹಾಳಾಗಿದೆ. ಈ ರಸ್ತೆಯನ್ನು ಮೂಡಿಗೆರೆ ವ್ಯಾಪ್ತಿಗೆ ಹಸ್ತಾಂತರಿಸುವಂತೆ ಸಕಲೇಶಪುರ ಶಾಸಕರೊಂದಿಗೆ ಮಾತುಕತೆ ನಡೆಸಿದ್ದು, ಹಾಸನ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದು ಈ ರಸ್ತೆಯನ್ನು ಮೂಡಿಗೆರೆ ಉಪವಿಭಾಗಕ್ಕೆ ಸೇರಿಸುವಂತೆ ಕೋರಲಾಗಿದೆ. ಈ ಬಗ್ಗೆ ಇಲಾಖೆಯ ಸಚಿವರ ಗಮನಕ್ಕೂ ತರಲಾಗಿದೆ. ಈ ರಸ್ತೆ ಮೂಡಿಗೆರೆ ಉಪವಿಭಾಗಕ್ಕೆ ಹಸ್ತಾಂತರ ಆದ ತಕ್ಷಣ ಅಭಿವೃದ್ದಿಗೆ ಕ್ರಮ ವಹಿಸಲಾಗುವುದು. ಮಳೆ ಬಿಡುವು ನೀಡಿದ ತಕ್ಷಣ ತಾತ್ಕಾಲಿಕ ಗುಂಡಿ ಮುಚ್ಚುವುದಕ್ಕೆ ಸೂಚನೆ ನೀಡುತ್ತೇನೆ.

ಶ್ರೀಮತಿ ನಯನಾ ಮೋಟಮ್ಮ,

ಶಾಸಕರು, ಮೂಡಿಗೆರೆ ಕ್ಷೇತ್ರ

ಜಪಾವತಿ ಹೊಳೆಯಿಂದ ದೇವರುಂದ ವರೆಗಿನ ರಸ್ತೆಯಲ್ಲಿ ಸಂಚಾರ ಮಾಡುವುದು ದೊಡ್ಡ ಹರಸಾಹಸವಾಗಿದೆ. ವಾಹನಗಳ ಅಡಿಭಾಗ ರಸ್ತೆಯ ಉಬ್ಬುಗಳಿಗೆ ತಾಗಿ ವಾಹನ ಸವಾರರಿಗೆ ತೀವ್ರ ನಷ್ಟವಾಗುವುತ್ತಿದೆ. ಮೂಡಿಗೆರೆ ಶಾಸಕರು ಸ್ಥಳೀಯರ ಬೇಡಿಕೆಯನ್ನು ಮನ್ನಿಸಿ ಈ ರಸ್ತೆ ಅಭಿವೃದ್ದಿಗೆ ಅನುದಾನ ನೀಡಿದ್ದಾರೆ. ರಸ್ತೆಯ ವ್ಯಾಪ್ತಿಯ ಬಗ್ಗೆ ಎರಡೂ ತಾಲ್ಲೂಕಿನ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ನಡುವೆ ಸಭೆ ನಡೆಸಿದ್ದರೂ ಸಹ ಸಮಸ್ಯೆ ಬಗೆಹರಿಯುತ್ತಿಲ್ಲ. ತಮ್ಮ ಸ್ವಪ್ರತಿಷ್ಠೆಯನ್ನು ಬಿಟ್ಟು ಆದಷ್ಟು ಬೇಗ ಈ ರಸ್ತೆಯನ್ನು ಅಭಿವೃದ್ಧಿ ಮಾಡಿ ಜನರ ಸಂಕಷ್ಟವನ್ನು ನಿವಾರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕಾಗಿದೆ.

* ರೋಹಿತ್ ಹೊಸಳ್ಳಿ, ಯುವ ಮುಖಂಡ

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ