ಚಾಲಕನ ನಿಯಂತ್ರಣ ತಪ್ಪಿ ಭದ್ರಾ ನದಿಗೆ ಪಿಕಪ್ ಬಿದ್ದ ಪರಿಣಾಮ ಯುವಕ ಕಣ್ಮರೆಯಾಗಿದ್ದು, ನೀರಿನಲ್ಲಿ ಕೊಂಚಿಕೊಂಡು ಹೋಗಿ ಸಾವನ್ನಪ್ಪಿದ್ದಾನೆ ಎಂದು ಶಂಕಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನಲ್ಲಿ ಈ ದುರ್ಘಟನೆ ನಡೆದಿದೆ. ಇತ್ತ ಮಗ ಸಾವನ್ನಪ್ಪಿದ್ದಾನೆ ಎಂದು ಮನನೊಂದು ತಾಯಿಯೂ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳಸ ಸಮೀಪದ ಕೊಳಮಾಗೆ ಗ್ರಾಮದಲ್ಲಿ ಗುರುವಾರ ಕಳಸ ಗಣಪತಿ ಕಟ್ಟೆ ನಿವಾಸಿ ಶಮಂತ್ (23 ವರ್ಷ) ಎಂಬ ಯುವಕ ಪಿಕಪ್ ವಾಹನ ಸಮೇತ ತುಂಬಿ ಹರಿಯುತ್ತಿದ್ದ ಭದ್ರಾ ನದಿಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಭದ್ರಾ ನದಿಯ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಪಿಕಪ್ ಸಮೇತ ನದಿಗೆ ಬಿದ್ದು ಯುವಕ ಮೃತಪಟ್ಟಿದ್ದಾನೆ ಎಂದು ಶಂಕಿಸಲಾಗಿದೆ. ಚಾಲಕ ಶಮಂತ್ ಕಾಫಿ ತೋಟಕ್ಕೆ ಕಾರ್ಮಿಕರ ಟ್ರಿಪ್ ಹೊಡೆಯುತ್ತಿದ್ದ. ಬಾಡಿಗೆ ಇದೆ ಎಂದು ಕಳಸಕ್ಕೆ ಬಂದು ವಾಪಸ್ ಹೋಗುವಾಗ ಈ ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ.
ವಿಪರೀತ ಮಳೆಯಿಂದ ಪಿಕಪ್ ಚಲಾಯಿಸುವಾಗ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು ನಂತರ ಭದ್ರನದಿಗೆ ಚಾಲಕನ ಸಮೇತ ಉರುಳಿ ಬಿದ್ದಿದೆ ಎನ್ನಲಾಗಿದೆ. ಆದರೆ ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಪಿಕಪ್ ಕೊಚ್ಚಿಕೊಂಡು ಹೋಗಿದ್ದು ಗುರುವಾರ ತಡರಾತ್ರಿವರೆಗೆ ಹುಡುಕಾಟ ನಡೆಸಿದರೂ ಪಿಕಪ್ ಮತ್ತು ಅದರ ಚಾಲನೆ ಮಾಡುತ್ತಿದ್ದ ಶಮಂತ್ ಅವರ ಸುಳಿವು ಸಿಕ್ಕಿರಲಿಲ್ಲ.
ಸ್ಥಳಕ್ಕೆ ಕಳಸ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುರಿಯುತ್ತಿರುವ ಮಳೆಯಿಂದ ಕಾರ್ಯಾಚರಣೆಗೂ ತೊಂದರೆಯುಂಟಾಗಿದೆ. ಬಾಳೆಹೊನ್ನೂರಿನಿಂದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದು, ಮುಳುಗು ತಜ್ಞ ಮಲ್ಪೆ ಈಶ್ವರ್ ಅವರನ್ನೂ ಕರೆಸಲು ಸಿದ್ಧತೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ಮಗನ ದರಂತ ಸಹಿಸದೇ ತಾಯಿಯೂ ಆತ್ಮಹತ್ಯೆ !
ಇತ್ತ ತನ್ನ ಮುದ್ದಿನ ಮಗ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ ಎಂಬ ವಿಷಯ ತಿಳಿದು ಶಮಂತ್ ತಾಯಿ ಕೆರೆಗೆಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಶಮಂತ್ ತಾಯಿ ರವಿಕಲಾ (48 ವರ್ಷ) ಮಗನ ಸಾವಿನ ಸುದ್ದಿ ತಿಳಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರವಿಕಲಾ ಅವರು ಮೇಸ್ತ್ರಿಯಾಗಿದ್ದು, ತೋಟಕ್ಕೆ ಜನಗಳನ್ನು ಒಟ್ಟುಗೂಡಿಸಿ ಕರೆದೊಯ್ಯುತ್ತಿದ್ದರು. ಗುರುವಾರವೂ ಸಹ ತನ್ನ ಮಗನ ಪಿಕಪ್ ನಲ್ಲಿಯೇ ಜನಗಳನ್ನು ತೋಟವೊಂದಕ್ಕೆ ಕರೆದೊಯ್ದು ಕೆಲಸ ಮಾಡಿಸುತ್ತಿದ್ದರು. ಮಗ ಸಂಜೆ ಜನಗಳನ್ನು ವಾಪಾಸ್ಸು ಕರೆದೊಯ್ಯಲು ಕಳಸ ಕಡೆಯಿಂದ ಬರುತ್ತಿದ್ದಾಗ ಅವಘಡ ಸಂಭವಿಸಿದೆ. ತಾಯಿ ಸಾಲ ಮಾಡಿ ಮಗನಿಗೆ ಪಿಕಪ್ ಕೊಡಿಸಿದ್ದರು ಎನ್ನಲಾಗಿದೆ.
ಅವಘಡ ಸಂಭವಿಸಿದ ಸ್ಥಳದಲ್ಲಿ ತಾಯಿ ಗೋಳಾಟ ಹೇಳತಿರದ್ದಾಗಿತ್ತು. ಅವರನ್ನು ಒತ್ತಾಯಪೂರ್ವಕವಾಗಿ ಮನೆಗೆ ಕರೆದೊಯ್ಯಲಾಗಿತ್ತು.
ಗುರುವಾರ ರಾತ್ರಿ ಇದ್ದಕ್ಕಿದಂತೆ ರವಿಕಲಾ ಇಲ್ಲದೆ ಕಣ್ಮರೆಯಾಗಿದ್ದನ್ನು ಗಮನಿಸಿ ಹುಡುಕಾಟ ನಡೆಸಿದ್ದಾರೆ. ಹುಡುಕಾಟ ನಡೆಸುವಾಗ ಮನೆಯ ಸಮೀಪವೇ ಇದ್ದ ಕೆರೆಗೆ ಹಾರಿರುವುದು ಗೊತ್ತಾಗಿದೆ. ಕೂಡಲೇ ಕೆರೆಯಿಂದ ಅವರ ದೇಹವನ್ನು ಹೊರತೆಗೆದು ಕಳಸ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ರವಿಕಲಾ ಮೃತರಾಗಿದ್ದರು ಎಂದು ತಿಳಿದುಬಂದಿದೆ.
ದುಡಿಮೆಯಿಂದಲೇ ಬದುಕು ಸಾಗಿಸುತ್ತಿದ್ದ ಕಳಸ ಗಣಪತಿ ಕಟ್ಟೆ ನಿವಾಸಿಗಳಾದ ರವಿಕಲಾ ಹಾಗೂ ರಮೇಶ್ ದಂಪತಿಗಳಿಗೆ ಇಬ್ಬರು ಗಂಡುಮಕ್ಕಳು. ಇದೀಗ ಕುಟುಂಬದಲ್ಲಿ ಕಿರಿಯ ಮಗ ಶಮಂತ್ ಹಾಗೂ ತಾಯಿ ಒಂದೇ ದಿನ ದುರಂತ ಸಾವನ್ನಪ್ಪಿದ್ದಾರೆ. ಇತ್ತ ಮಗನ ದೇಹಕ್ಕಾಗಿ ಹುಡುಕಾಟ ನಡೆಯುತ್ತಿದ್ದರೆ ಅತ್ತ ತಾಯಿ ಶವವಾಗಿ ಕಳಸ ಆಸ್ಪತ್ರೆಯ ಶವಾಗಾರದಲ್ಲಿ ಮಲಗಿದ್ದಾರೆ. ಇದರಿಂದ ಕುಟುಂಬದವರ ಮತ್ತು ಬಂಧುಗಳ ರೋಧನ ಹೇಳತೀರದಾಗಿದೆ.



