ʻಆಪರೇಷನ್ ಮಹಾದೇವ್ʼ ಹೆಸರಿನಲ್ಲಿ ನಡೆದ ಪ್ರಮುಖ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಶ್ರೀನಗರದ ಲಿಡ್ವಾಸ್ ಪ್ರದೇಶದಲ್ಲಿ ಮೂವರು ವಿದೇಶಿ ಉಗ್ರರನ್ನ ಹತ್ಯೆಗೈದಿವೆ. ಹತ್ಯೆಗೈದ ಮೂವರಲ್ಲಿ ಓರ್ವ ಉಗ್ರ ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ಮುಖ್ಯ ಹಂತಕ ಅನ್ನೋದು ಖಚಿತವಾಗಿದೆ.
ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನರಮೇಧ ನಡೆಸಿದ ಪ್ರಮುಖ ಉಗ್ರ ಹಾಶಿಮ್ ಮೂಸಾ ಅಲಿಯಾಸ್ ಸುಲೇಮಾನ್ ಮೂಸಾನನ್ನ ಹೊಡೆದುರುಳಿಸಿರುವುದಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮೂಲಗಳು ಮಾಹಿತಿ ಹಂಚಿಕೊಂಡಿವೆ.
ಹಾಶಿಮ್ ಮೂಸಾ ಪಾಕಿಸ್ತಾನ ಸೇನೆಯ ಹಿನ್ನೆಲೆ ಹೊಂದಿದ್ದಾನೆ. ಪಾಕಿಸ್ತಾನದ ಪ್ಯಾರಾ ಕಮಾಂಡೊ ಆಗಿದ್ದ ಮೂಸಾ ವಿಶೇಷ ತರಬೇತಿ ಪಡೆದಿದ್ದ. ಲಷ್ಕರ್-ಎ-ತೈಬಾದಲ್ಲೂ ಪ್ರಮುಖನಾಗಿ ಗುರುತಿಸಿಕೊಂಡಿದ್ದ, ಅದಕ್ಕಾಗಿಯೇ ಸ್ಥಳೀಯರಲ್ಲದವರನ್ನ ಕೊಲ್ಲಲು, ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಮೂಸಾನನ್ನ ಭಾರತಕ್ಕೆ ಕಳುಹಿಸಲಾಗಿತ್ತು ಎಂದು ತಿಳಿದುಬಂದಿದೆ.
ಸುಳಿವು ನೀಡಿದ ಸ್ಯಾಟಲೈಟ್ ಫೋನ್‌ಗಳು
ಪಹಲ್ಗಾಮ್ ದಾಳಿ ಬಳಿಕ ಆಫ್ ಆಗಿದ್ದ ಸ್ಯಾಟಲೈಟ್ ಫೋನ್‌ಗಳು ಕೆಲ ದಿನದ ಹಿಂದೆ ಅಕ್ಟಿವ್ ಆಗಿದ್ದು, ಉಗ್ರರನ್ನು ಬೇಟೆಯಾಡಲು ಸೇನೆಗೆ ಸಹಕಾರಿಯಾಗಿದೆ ಎಂಬ ವಿಷಯ ತಿಳಿದುಬಂದಿದೆ.
ಪಹಲ್ಗಾಮ್ ದಾಳಿ ಬಳಿಕ ಸ್ಯಾಟ್‌ಲೈಟ್ ಫೋನ್‌ಗಳ ಮೇಲೆ ಸೇನೆ ನಿಗಾ ಇಟ್ಟಿತ್ತು. ಉಗ್ರರ ದಾಳಿ ಬಳಿಕ ಸುಮಾರು ಎರಡು ತಿಂಗಳಿಂದ ನಿಷ್ಕ್ರಿಯಗೊಂಡಿದ್ದ ಸ್ಯಾಟ್‌ಲೈಟ್ ಫೋನ್‌ಗಳು ಆನ್ ಆಗಿದ್ದು, `ಆಪರೇಷನ್ ಮಹದೇವ್ʼ ಕಾರ್ಯಾಚರಣೆಗೆ ಕಾರಣವಾಯಿತು ಎಂದು ಸೇನೆಯ ಉನ್ನತ ಮೂಲಗಳು ತಿಳಿಸಿವೆ.
ಫೋನ್ ಟ್ರ್ಯಾಕ್ ಮಾಡಿದಾಗ ಡಚಿಗಮ್‌ನಲ್ಲಿ ಸ್ಯಾಟಲೈಟ್ ಫೋನ್ ಬಳಕೆಯಾಗಿರುವುದು ತಿಳಿದು ಬಂದಿತ್ತು. ಆದರೆ ಅಲ್ಲಿ ಯಾವ ಜನವಸತಿ ಇಲ್ಲ. ಅನುಮಾನಾಸ್ಪದ ಕರೆಯಿಂದ ಸೇನೆ ಕಾರ್ಯಾಚರಣೆಗೆ ಮುಂದಾಯಿತು. ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರು ಹತ್ಯೆ ಮಾಡಲಾಗಿದೆ.



