ಅಪೋಲೋ 11 ಸಂಭ್ರಮಾಚರಣೆಗೆ ಅರ್ಹವಾದ ಮನುಕುಲದ ಅಸಾಧಾರಣ ಸಾಧನೆಯಾಗಿದೆ ಎಂದು ಕೀಟ ತಜ್ಞರಾದ ಡಾ.ಅವಿನಾಶ್ ಹೇಳಿದರು.
ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ನಡೆದ ಅಪೋಲೋ 11 ರ 56ನೇ ವರ್ಷಾಚರಣೆ ಮತ್ತು ತೇಜಸ್ವಿ ಅವರ ಚಂದ್ರನ ಚೂರು ಕೃತಿಯ ಅವಲೋಕನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಅಪೋಲೋ ಯಾತ್ರೆ ಚಾರಿತ್ರಿಕವಾಗಿ ಮಾನವ ಬುದ್ದಿಮತ್ತೆ ಮತ್ತು ವಿಜ್ಞಾನದ ಶಕ್ತಿಯನ್ನು ಸಾಕ್ಷಾತ್ಕರಿಸಿದ ಅಮೃತ ಘಳಿಗೆ. ಇದರ ಜೊತೆಗೆ ನೀಲ್ ಆರ್ಮ್‍ಸ್ಟ್ರಾಂಗ್, ಬಜ್ ಆಲ್ಡ್ರಿನ್ ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿದು ಚಂದ್ರನ ಅಂಗಳದಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿದ ಕ್ಷಣ.
ಈ ಅದ್ವಿತೀಯ ಯಾತ್ರೆಗೆ ಮತ್ತು ಚಂದ್ರನ ಮೇಲಿನ ಐತಿಹಾಸಿಕ ನಡಿಗೆಗೆ ಈಗ 56ನೇ ವರ್ಷದ ಸಂಭ್ರಮ. ಅಪೋಲೋ 11 ರ ಹಿನ್ನಲೆ, ಕಾಲಗಣನೆ, ಯಾತ್ರೆಯ ಉದ್ದೇಶಗಳು ಮತ್ತು ಪ್ರಯಾಣದ ವಿವರಗಳನ್ನು ಅರಿಯುವುದು ಒಂದು ರೋಮಾಂಚಕ ಅನುಭವ ಎಂದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸಿ.ರಮೇಶ್ ಮಾತನಾಡಿ, ವಿಜ್ಞಾನ, ಕಲೆ, ಸಾಹಿತ್ಯ ಎಲ್ಲವನ್ನೂ ಒಳಗೂಡಿಸಿಕೊಂಡು ಕತಿಗಳನ್ನು ರಚಿಸಿದವರು ತೇಜಸ್ವಿ. ಈ ಕಾರಣದಿಂದಲ್ಲೇ ತೇಜಸ್ವಿ ಪ್ರತಿಷ್ಠಾನದ ಕಾರ್ಯಕ್ರಮಗಳು ಕೂಡ ಕಲೆ, ಸಾಹಿತ್ಯ, ವಿಜ್ಞಾನ, ಚಿತ್ರಕಲೆ, ಪೋಟೋಗ್ರಫಿ ಮುಂತಾದವುಗಳಿಗೆ ಸಂಬಂಧಿಸಿದಾಗಿರುತ್ತದೆ. ತೇಜಸ್ವಿ ಅವರು ತಮ್ಮ ಚಂದ್ರನ ಚೂರು ಕೃತಿಯಲ್ಲಿ ಅಪೋಲೋ 11 ರ ಪ್ರಮುಖ ವೈಜ್ಞಾನಿಕ ಮಾಹಿತಿಗಳನ್ನು ಪರಿಣಾಮಕಾರಿಯಾಗಿ ಓದುಗರಿಗೆ ದಾಟಿಸಿದ್ದಾರೆ ಎಂದರು.
ಏಕಲವ್ಯ ಮಾದರಿ ವಸತಿ ಶಾಲೆಯ ಉಪನ್ಯಾಸಕರಾದ ಬೌತಶಾಸ್ತ್ರ ಉಪನ್ಯಾಸಕ ಅಮಿತ್ ಕುಮಾರ್ ಮತ್ತು ಜೀವಶಾಸ್ತ್ರ ಉಪನ್ಯಾಸಕಿ ದಿವ್ಯಾಶ್ರೀ ಮಾತನಾಡಿದರು.
ಈ ಸಂದರ್ಭದಲ್ಲಿ ತೇಜಸ್ವಿ ಪ್ರತಿಷ್ಠಾನದ ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿ ಸತೀಶ್ ತರುವೆ, ಸಂಗೀತಾ, ಲೇಖಕರಾದ ಪೂರ್ಣೆಶ್ ಮತ್ತಾವರ, ರೂಪ ಬಂಗಾರ ಚೆಲುವಯ್ಯ, ಏಕಲವ್ಯ ಮಾದರಿ ವಸತಿ ಶಾಲೆಯ ಉಪನ್ಯಾಸಕರಾದ ರವಿ, ಚಂದನಾ, ಕಾಮಿನಿ. ನಾಹಿರಾ ಬೇಗಂ, ವಿಜಯ್, ವಿನುತಾರಾಜ್, ಹಾಗೂ ಏಕಲವ್ಯ ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು.



