ಮೂಡಿಗೆರೆ ತಾಲೂಕಿನಲ್ಲಿ ಈ ಬಾರಿ ವ್ಯಾಪಕ ಮಳೆಯಾಗುತ್ತಿದೆ. ಅತಿವೃಷ್ಟಿಯಿಂದಾಗಿ ಬೆಳೆಹಾನಿ ಸೇರಿದಂತೆ ಆರ್ಥಿಕ ಸಂಕಷ್ಟ ಎದುರಿಸಲು ಸರಕಾರ ಯೋಜನೆಗಳನ್ನು ರೈತರು ಬಳಸಿಕೊಳ್ಳಬೇಕೆಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಅವರು ಸೋಮವಾರ ಪಟ್ಟಣದ ಶಾಸಕರ ಕಚೇರಿ ಆವರಣದಲ್ಲಿ 2025-26 ನೇ ಸಾಲಿನ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ಭತ್ತದ ಬೆಳೆ ವಿಮೆ ನೋಂದಣಿ ಹಾಗೂ ರೈತರ ಬೆಳೆ ಸಮೀಕ್ಷೆ ಮೊಬೈಲ್ ಆಪ್ ಮಾಹಿತಿ ಬಗ್ಗೆ ಆಟೋ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶದ ಬೆನ್ನೆಲುಬಾಗಿರುವ ರೈತರ ಸಮಸ್ಯೆ ಬಗೆಹರಿಸುವುದು ಸರಕಾರದ ಜವಾಬ್ದಾರಿಯಾಗಿದೆ. ಈಗಾಗಲೇ ತಾಲೂಕಿನಲ್ಲಿ ಮಳೆ ಅಧಿಕವಾಗಿದ್ದು, ಭತ್ತ ಬೆಳೆಗೆ ಮಳೆ ಮಾರಕವಾಗುತ್ತಿದೆ. ಅಲ್ಲದೇ ಇಲ್ಲಿನ ಸಾಂಪ್ರಾಯಿಕ ಬೆಳೆಯಾದ ಕಾಫಿ, ಕಾಳುಮೆಣಸು, ಅಡಕೆ ಬೆಳೆಗೆ ಕೊಳೆರೋಗ ಸೇರಿದಂತೆ ನಾನಾ ರೀತಿಯಲ್ಲಿ ಹಾನಿ ಸಂಭವಿಸುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆಂದು ಹೇಳಿದರು.
ರೈತರು ಆರ್ಥಿಕ ಸಂಕಷ್ಟ ಬಗೆಹರಿಸಿಕೊಳ್ಳಬೇಕೆಂಬ ದೃಷ್ಟಿಯಿಂದ ಭತ್ತದ ಬೆಳೆ ವಿಮೆ ನೋಂದಣಿ ಹಾಗೂ ರೈತರ ಬೆಳೆ ಸಮೀಕ್ಷೆ ಮೊಬೈಲ್ ಆಪ್ ಬಗ್ಗೆ ಮೂಡಿಗೆರೆ ಹಾಗೂ ಕಳಸ ತಾಲೂಕಿನ ಎಲ್ಲಾ ಗ್ರಾ.ಪಂ. ವ್ಯಾಪ್ತಿಯಲ್ಲಿ ಆಟೋ ಪ್ರಚಾರ ನಡೆಸಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇದರ ಸದುಪಯೋಗ ಎಲ್ಲಾ ರೈತರು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು. ನಂತರ ಬೆಳೆ ಸಮೀಕ್ಷೆ ಜಾಗೃತಿ ಅರಿವಿನ ಕರಪತ್ರ ಬಿಡುಗಡೆಗೊಳಿಸಿದರು.
ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಡಿ.ಎಲ್.ಅಶೋಕ್ ಕುಮಾರ್, ಜಿಲ್ಲಾ ಪ್ರತಿನಿಧಿ ಪಿ.ಕೆ.ನಾಗೇಶ್, ಸಹಾಯಕ ಕೃಷಿ ನಿರ್ದೇಶಕಿ ಸುಮ, ಆತ್ಮ ಯೋಜನೆಯ ತಾಂತ್ರಿಕ ವ್ಯವಸ್ಥಾಪಕರಾದ ಶ್ವೇತಾ, ರಶ್ಮಿ, ಪ್ರದೀಪ್ ಮುಂತಾದವರು ಉಪಸ್ಥಿತರಿದ್ದರು.



