ಭಾರತದ ಕಾಫಿಯನ್ನು ವಿಶ್ವದ ಶ್ರೇಷ್ಟ ಕಾಫಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಕಾಫಿ ಮಂಡಳಿ ಗುರಿಯನ್ನು ಹೊಂದಿದೆ ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ಹೇಳಿದರು.
ಅವರು ಭಾನುವಾರ ಮೂಡಿಗೆರೆಯ ದಿ ಕಾಫಿ ಕೋರ್ಟ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜೆಸಿಐ ಅಲ್ಯುಮ್ನಿ ಕ್ಲಬ್ ಮುಡಿಗೆರೆ ವಲಯ ಮಟ್ಟದ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
7 Beans to 7 Lakh Ton (7 ಬೀಜಗಳಿಂದ 7 ಲಕ್ಷ ಟನ್) ಎಂಬ ದ್ಯೇಯ ವಾಕ್ಯದೊಂದಿಗೆ ಭಾರತದ ಕಾಫಿ ಉತ್ಪಾದನೆಯನ್ನು 7 ಲಕ್ಷ ಟನ್ ಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲಾಗುತ್ತಿದೆ. ಅತಿಹೆಚ್ಚು ಇಳುವರಿ ನೀಡುವ ಗುಣವನ್ನು ಹೊಂದಿರುವ ಕ್ಲೋನಿಂಗ್ ಮತ್ತು ಟಿಶ್ಯೂ ಕಲ್ಚರ್ ಗಿಡಗಳನ್ನು ಹೆಚ್ಚು ಹೆಚ್ಚು ಪ್ರಚುರಪಡಿಸಲಾಗುತ್ತಿದೆ. ಕಾಫಿ ಬೆಳೆ ಮತ್ತು ಉದ್ದಿಮೆಗೆ ಸಂಬಂಧಿಸಿದಂತೆ ಯುವಕರಿಗೆ ಹೆಚ್ಚಿನ ಮಾಹಿತಿ, ತರಬೇತಿ ಆಯೋಜಿಸಲಾಗುತ್ತಿದೆ. ಭಾರತದ ಫಿಲ್ಟರ್ ಕಾಫಿ ವಿಶ್ವದ ಎರಡನೇ ಶ್ರೇಷ್ಟ ರುಚಿಯ ಕಾಫಿಯಾಗಿದ್ದು, ಇದನ್ನು ಮಾಡುವ ವಿಧಾನದ ಬಗ್ಗೆ ಕಾಫಿ ಮಂಡಳಿಯಿಂದ ತರಬೇತಿಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಜೇಸಿ, ಲಯನ್ಸ್, ರೋಟರಿ ಸಂಸ್ಥೆಗಳಂತೆ ಕಾಫಿ ಬೆಳೆಗಾರರ ಸಂಘಟನೆಗಳು ಸಹ ಚಲನಶೀಲವಾಗಿರುವಂತೆ ಮಾಡುವ ನಿಟ್ಟಿನಲ್ಲಿ ಚಿಂತಿಸಬೇಕು. ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಅವಧಿಯನ್ನು ನಿಗದಿಗೊಳಿಸಿ ಹೊಸಬರಿಗೆ ಅವಕಾಶ ನೀಡುತ್ತಾ ಹೋಗಬೇಕು ಆಗ ಸಂಘಟನೆಗಳು ಹೆಚ್ಚು ಆಸಕ್ತಿ ಮತ್ತು ಚುರುಕಿನಿಂದ ಕೆಲಸ ಮಾಡಲು ಸಾಧ್ಯ ಎಂದು ಸಲಹೆ ನೀಡಿದರು. ಜಾಗತಿಕ ಕಾಫಿ ಮಾರುಕಟ್ಟೆ, ರಫ್ತು ಅವಕಾಶಗಳು ಮತ್ತು ಬೆಳೆಗಾರರಿಗೆ ಉತ್ತಮ ಬೆಲೆ ಸಿಗಲು ಗುಣಮಟ್ಟ ಸುಧಾರಣೆ ಅಗತ್ಯತೆಗಳ ಬಗ್ಗೆ ಗಮನ ಹರಿಸಬೇಕು ಎಂದರು.
ಸಭೆಯಲ್ಲಿ ಸುಸ್ಥಿರ ಕಾಫಿ ಕೃಷಿಯ ಮೂಲಕ ಭಾರತೀಯ ಕಾಫಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗುವ ಅವಕಾಶಗಳು ಕುರಿತು ಚರ್ಚೆ ನಡೆಯಿತು.
ಈ ಸಭೆಯ ಅಧ್ಯಕ್ಷತೆಯನ್ನು ಅಲ್ಯುಮ್ನಿ ಕ್ಲಬ್ ವಲಯ ಅಧ್ಯಕ್ಷ ಯೋಗೇಶ್ ಎಚ್.ಕೆ. ವಹಿಸಿದ್ದರು. ವಲಯ ಸಂಯೋಜಕ ರಾಜೇಶ್ ಜಿ.ಟಿ., ಜೇಸಿಐ ವಲಯ ಕಾರ್ಯದರ್ಶಿ ಸುಪ್ರೀತ್ ಕಾರಬೈಲ್, ಸದಸ್ಯರಾದ ವಿಶ್ವಕುಮಾರ್, ಹೆಚ್.ಆರ್.ಪ್ರದೀಪ್, ಕೆಎಲ್ಎಸ್ ತೇಜಸ್ವಿ, ಅತುಲ್ ರಾವ್, ವಿಜಯ್‌ಕುಮಾರ್, ನಯನ ಕಣಚೂರು ಕುಮಾರ್, ಶಶಿಕರಣ್ ಮಾಕೋನಹಳ್ಳಿ, ನಾಗೇಶ್ ಮಾಡ್ಕಲ್, ಪ್ರಸನ್ನ ಗೌಡಹಳ್ಳಿ, ಚಂದ್ರಶೇಖರ್ ಕುನ್ನಳ್ಳಿ, ಸಂದೇಶ್ ಹಳಿಕೆ, ಸಚಿನ್ ಶೆಟ್ಟಿ, ಸುನಿಲ್, ಲೇಡಿಜೇಸಿ ಸದಸ್ಯರುಗಳು ಉಪಸ್ಥಿತರಿದ್ದರು.




