ಜೇನಿನ ಸಂತತಿ ನಾಶವಾದರೆ ಅದು ಇಡೀ ಜೀವಸಂಕುಲಕ್ಕೆ ಮಾರಕವಾಗಿ ಪರಿಣಮಿಸುತ್ತದೆ ಹಾಗಾಗಿ ನಾವೆಲ್ಲರೂ ಜೇನು ಸಂತತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ. ಆರ್. ಬಾಲಕೃಷ್ಣ ತಿಳಿಸಿದರು.
ಅವರು ಶುಕ್ರವಾರ ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ತೋಟಗಾರಿಕಾ ಇಲಾಖೆಯಿಂದ ಹಮ್ಮಿಕೊಂಡಿದ್ದ ವೈಜ್ಞಾನಿಕ ಜೇನು ಕೃಷಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರವು ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯ ಅಡಿಯಲ್ಲಿ ಹಲವಾರು ಸವಲತ್ತುಗಳನ್ನು ನೀಡುತ್ತಿದೆ ಇವುಗಳನ್ನು ರೈತರಿಗೆ ಸಮರ್ಪಕವಾಗಿ ತಲುಪಿಸುವ ಕೆಲಸ ಆಗಬೇಕು. ಜೇನು ಕೃಷಿಯ ಬಗ್ಗೆ ಗ್ರಾಮೀಣ ಪ್ರದೇಶದ ರೈತರಲ್ಲಿ ಅರಿವು ಮೂಡಿಸಲು ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು, ಜೇನು ಸಾಕಾಣಿಕೆ ಮಾಡಲು ಆಸಕ್ತ ರೈತರಿಗೆ ಸರ್ಕಾರ ಸಹಾಯಧನದಲ್ಲಿ ಜೇನುಪೆಟ್ಟಿಗೆಯನ್ನು ಒದಗಿಸುತ್ತಿದೆ ಇದನ್ನು ರೈತರು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಲೆನಾಡಿನಲ್ಲಿ ಭತ್ತದ ಕೃಷಿ ಕ್ಷೀಣವಾಗುತ್ತಿದೆ. ಭತ್ತ ಬೆಳೆಯುವುದು ಲಾಭದಾಯಕವಲ್ಲ ಎಂದು ರೈತರು ಭತ್ತದ ಕೃಷಿಯ ಕಡೆಗೆ ಆಸಕ್ತಿ ತೋರುತ್ತಿಲ್ಲ. ಆದರೆ ನಮ್ಮ ನದಿಗಳು ಜಲಮೂಲಗಳು ನಿರಂತರವಾಗಿ ಹರಿಯಬೇಕು ಎಂದರೆ ಭತ್ತದ ಗದ್ದೆಗಳು ಅವಶ್ಯಕ. ನಿಟ್ಟಿನಲ್ಲಿ ಸರ್ಕಾರ ಭತ್ತ ಬೆಳೆಯುವ ರೈತರಿಗೆ ಸಹಾಯಧನ ನೀಡುವ ಯೋಜನೆ ರೂಪಿಸಬೇಕು ಎಂದು ತಿಳಿಸಿದರು.
ವೈಜ್ಞಾನಿಕ ಜೇನು ಕೃಷಿ ಬಗ್ಗೆ ರೈತರಿಗೆ ತರಬೇತಿ ನೀಡಿದ ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಸುಚಿತ್ರ ಕುಮಾರಿ ಅವರು ಮಾತನಾಡಿ ಜೇನು ಕೃಷಿ ಒಂದು ಲಾಭದಾಯಕ ಉದ್ಯಮವಾಗಿದೆ, ಜೇನಿಗೆ ಬಹಳಷ್ಟು ಬೇಡಿಕೆ ಇದೆ, ಜೇನು ಕೃಷಿಯ ಬಗ್ಗೆ ಅರಿವು ಪಡೆದು ವೈಜ್ಞಾನಿಕವಾಗಿ ಸಾಕಾಣಿಕೆ ಮಾಡಿದರೆ ಅದರಿಂದ ಹೆಚ್ಚಿನ ಇಳುವರಿ ಮತ್ತು ಲಾಭ ಪಡೆಯಬಹುದು. ಜೇನು ಒಂದು ಸೂಕ್ಷ್ಮವಾದ ಕೀಟವಾಗಿದ್ದು ಇದರ ನಿರ್ವಹಣೆ ಮಾಡುವಾಗ ಅತಿ ಜಾಗರೂಕತೆ ಅಗತ್ಯವಾಗಿದೆ ಇದರ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ತೋಟಗಾರಿಕೆ ಮತ್ತು ಕೃಷಿ ವಿಜ್ಞಾನ ಕೇಂದ್ರಗಳು ಮಾಡುತ್ತಿವೆ, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಮೂಡಿಗೆರೆ ತೋಟಗಾರಿಕೆ ಇಲಾಖೆ ಅಧಿಕಾರಿ ಶ್ರೀಮತಿ ಶ್ವೇತ ಪ್ರಾಸ್ತಾವಿಕವಾಗಿ ಮಾತನಾಡಿ, ಪರಾಗಸ್ಪರ್ಶ ಕ್ರಿಯೆಯಲ್ಲಿ ಜೇನು ಹುಳುಗಳ ಪಾತ್ರ ಬಹುಮುಖ್ಯವಾಗಿದೆ. ಕಾಫಿ ಬೆಳೆಯುವ ಪ್ರದೇಶದಲ್ಲಿ ಕಾಫಿ ಹೆಚ್ಚಿನ ಇಳುವರಿ ಪಡೆಯಲು ಜೇನು ಹುಳುಗಳು ಸಹಾಯಕವಾಗಿವೆ. ತೋಟಗಾರಿಕಾ ಇಲಾಖೆಯಿಂದ ಜೇನು ಕೃಷಿಗೆ ಹೆಚ್ಚಿನ ಪ್ರೋತ್ಸಾಹ ಮತ್ತು ತರಬೇತಿ ನೀಡಲಾಗುತ್ತಿದೆ. ಇದನ್ನು ಬಹಳಷ್ಟು ರೈತರು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಜೇನು ಕೃಷಿಯ ಬಗ್ಗೆ ಆಸಕ್ತಿ ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಯತೀಶ್ ಬೆಟ್ಟಗೆರೆ, ನಿರ್ದೇಶಕರಾದ ಸತೀಶ್ ಕಡುವಳ್ಳಿ, ಪೂರ್ಣೇಶ್ ಜಿ.ಹೊಸಳ್ಳಿ, ಜಗನ್ನಾಥ ಗೌಡ ಯು ಹೊಸಳ್ಳಿ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಕೃಷ್ಣಮೂರ್ತಿ, ಕಾಫಿ ಮಂಡಳಿ ಮಾಜಿ ಸದಸ್ಯರಾದ ಬಾಲರಾಜು, ಉಪಸ್ಥಿತರಿದ್ದರು. ಕೃಷಿಕ ಸಮಾಜದ ನಿರ್ದೇಶಕ ಪಿ.ಕೆ ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ತೋಟಗಾರಿಕೆ ಇಲಾಖೆ ಅಧಿಕಾರಿ ರಾಮಯ್ಯ ಕಾರ್ಯಕ್ರಮ ನಿರೂಪಿಸಿದರು.
ತರಬೇತಿಯಲ್ಲಿ ಮೂಡಿಗೆರೆ ಹಾಗೂ ಸುತ್ತಮುತ್ತಲಿನ ಹಲವು ರೈತರು ಭಾಗವಹಿಸಿ ಜೇನು ಕೃಷಿಯ ಬಗ್ಗೆ ಮಾಹಿತಿ ಪಡೆದುಕೊಂಡರು.


