ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಸಂಗೀತ ಹಾಕಲು ಜಿಲ್ಲಾಡಳಿತ ಅನುಮತಿ ನೀಡುವಂತೆ ಹಿಂದೂ ಮಹಾಗಣಪತಿ ಸೇವಾ ಸಂಘ ಆಗ್ರಹಿಸಿದೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಘದ ಸದಸ್ಯ ಸಂತೋಷ್ ಕೋಟ್ಯಾನ್ ಮಾತನಾಡಿ, ಸುಪ್ರೀಂಕೋರ್ಟ್ ನಿಗಧಿಪಡಿಸಿರುವ ಮಾನದಂಡಗಳನ್ನು ಗಣಪತಿ ಪ್ರತಿಷ್ಠಾಪನಾ ಆಯೋಜಕರು ಪಾಲಿಸುತ್ತೇವೆ. ನಿಗಧಿಪಡಿಸಿದ ಡೆಸಿಬಲ್‌ಗಿಂದ ಹೆಚ್ಚು ಶಬ್ದ ಹಾಕುವುದಿಲ್ಲ. ರಾತ್ರಿ 10 ಗಂಟೆ ಮೇಲ್ಪಟ್ಟು ಡಿಜೆ ಬಳಸುವುದಿಲ್ಲ ಎಂದರು.
ಹೊಸ ವರ್ಷಾಚರಣೆ ಸಂದರ್ಭ ಬೆಂಗಳೂರಿನ ಪ್ರಮುಖ ಬೀದಿಗಳಲ್ಲಿ ಡಿಜೆಗೆ ಅವಕಾಶ ನೀಡಲಾಗುತ್ತದೆ. ನಮ್ಮ ಧಾರ್ಮಿಕ ಕಾರ್ಯಕ್ರಮಕ್ಕೆ ಏಕೆ ನಿಷೇಧ ಎಂದು ಪ್ರಶ್ನಿಸಿ ಜಿಲ್ಲಾಡಳಿತ ಡಿಜೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.
ಗಣಪತಿ ಸೇವಾ ಸಂಘದ ಅಧ್ಯಕ್ಷ ಶ್ಯಾಮ್ ವಿ ಗೌಡ ಮಾತನಾಡಿ, 12 ನೇ ವರ್ಷದ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಬುಧವಾರ ವಿಜೃಂಭಣೆಯಿಂದ ನಡೆದಿದೆ. ಹಿಂದೂ ಮಹಾಗಣಪತಿ ವಿಜಯ ಸಿಂದೂರ ಮಂಟಪದಲ್ಲಿ ನಿತ್ಯ ಸಂಜೆ 7 ಗಂಟೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಆ.30 ರಂದು ವಿಜಯ ಸಿಂದೂರು ಕುರಿತಂತೆ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.
ಸೆಪ್ಟಂಬರ್ 1 ರಂದು ಆರ್‌ಎಸ್‌ಎಸ್‌ಗೆ 100 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಯಾದವ ಕೃಷ್ಣ ಮತ್ತೂರು ಅವರಿಂದ ಉಪನ್ಯಾಸವಿದೆ. ಸೆ.3 ರಂದು ದೇವಸ್ಥಾನ ನಮ್ಮ ಸ್ವತ್ತು ಎಂಬ ವಿಷಯದ ಬಗ್ಗೆ ಹಿರೇಮಗಳೂರು ಕಣ್ಣನ್ ಮತ್ತು ನಾಗಶ್ರೀತ್ಯಾಗರಾಜ್ ಉಪನ್ಯಾಸ ನೀಡಲಿದ್ದಾರೆ ಎಂದರು.
ಉಳಿದ ದಿನಗಳಲ್ಲಿ ಛದ್ಮವೇಷ ಸ್ಪರ್ಧೆ, ಭರತನಾಟ್ಯ, ಭಕ್ತಿಲಹರಿ, ಯಕ್ಷಗಾನ, ಭಕ್ತಿ ಭಾವ ಸಂಗಮ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಹೇಳಿದರು.
ಸೆ.3 ರಂದು ಗಣಹೋಮ, ಮಹಾಮಂಗಳಾರತಿ, ಅನ್ನಸಂತರ್ಪಣೆ ಏರ್ಪಡಿಸಲಾಗಿದ್ದು, ಸೆ.5 ರಂದು ರಂಗಪೂಜೆ, ಸೆ.6 ರಂದು ಮಧ್ಯಾಹ್ನ 2 ಗಂಟೆಗೆ ಶ್ರೀ ಅವರನ್ನು ಅಲಂಕೃತ ಮಂಟಪದಲ್ಲಿ ಕೂರಿಸಿ ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿ ನಂತರ ಕೋಟೆ ಕೆರೆಯಲ್ಲಿ ವಿಸರ್ಜಿಸಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಗಣಪತಿ ಸೇವಾ ಸಂಘದ ಅಧ್ಯಕ್ಷ ಆಟೋ ಶಿವಣ್ಣ, ಸದಸ್ಯರಾದ ಶರತ್, ನೂತನ್, ಪಾರ್ಥಿವನ್, ವೀರೇಶ್ ಮತ್ತಿತರರಿದ್ದರು.



